ಸುಂಟಿಕೊಪ್ಪ, ಅ.೨೬ : ದಾರಿಮಧ್ಯದಲ್ಲಿ ಬಿದ್ದುಸಿಕ್ಕಿದ ಲೇಡಿಸ್ ಬ್ಯಾಗ್‌ನಲ್ಲಿದ್ದ ರೂ. ೨೮೦೦೦ ನಗದು, ಮೊಬೈಲ್ ಮತ್ತು ದಾಖಲಾತಿಗಳನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ಆಟೋ ಚಾಲಕರಿಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಸುಂಟಿಕೊಪ್ಪದ ಆಟೋ ಚಾಲಕರಾದ ಮುಜೀಬ್ ಮತ್ತು ಸುನಿಲ್ ಇವರುಗಳಿಗೆ ಸೋಮವಾರ ಸಂಜೆ ೫.೩೦ರ ಸಮಯದಲ್ಲಿ ಮಾದಾಪುರ ರಸ್ತೆಯ ಪನ್ಯ ಜಂಕ್ಷನ್‌ನಲ್ಲಿ ರೂ.೨೮೦೦೦ ನಗದು, ಆಧಾರ್ ಕಾರ್ಡ್ ಮತ್ತು ಮೊಬೈಲ್ ಇದ್ದ ಲೇಡಿಸ್ ಬ್ಯಾಗ್ ಬಿದ್ದುಸಿಕ್ಕಿದೆ. ಬ್ಯಾಗ್ ಅನ್ನು ಇವರಿಬ್ಬರು ನೇರವಾಗಿ ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ. ಷರೀಫ್ ಅವರಿಗೆ ಒಪ್ಪಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿ ಪುನಿತ್ ಕುಮಾರ್ ಅವರಿಗೆ ಮಾಹಿತಿ ನೀಡಲಾಯಿತು. ಇದೇ ವೇಳೆ ಬ್ಯಾಗ್‌ನಲ್ಲಿದ್ದ ಮೊಬೈಲ್‌ಗೆ ವಾರಸುದಾರರು ಕರೆ ಮಾಡಿದ್ದು, ಬ್ಯಾಗ್ ಸಿಕ್ಕಿರುವ ಮಾಹಿತಿಯನ್ನು ಅವರಿಗೆ ನೀಡಿದ ಮೇರೆಗೆ ಠಾಣೆಗೆ ಆಗಮಿಸಿ ಪಡೆದುಕೊಂಡಿದ್ದಾರೆ.
ಬೆಟ್ಟಗೇರಿ ತೋಟದ ಕಾರ್ಮಿಕರಾಗಿರುವ ರವಿ ಮತ್ತು ಅವರ ಪತ್ನಿ ಬೇರೊಂದು ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಅವರಿಗೆ ಅರಿವಿಲ್ಲದಂತೆ ಬ್ಯಾಗ್ ಬಿದ್ದುಹೋಗಿತ್ತು. ಹಣ, ಮೊಬೈಲ್ ಹಾಗೂ ದಾಖಲಾತಿಗಳನ್ನು ಹಿಂತಿರುಗಿಸಿದ ಆಟೋ ಚಾಲಕರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಿದೆ.