ಗುಡ್ಡೆಹೊಸೂರು, ಅ. ೨೬: ಇಲ್ಲಿಗೆ ಸಮೀಪದ ರಂಗಸಮುದ್ರ, ಹೊಸಪಟ್ಟಣ, ನಂಜರಾಯಪಟ್ಟಣ ವಿಭಾಗಗಳಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತ ಸಮಸ್ಯೆ ಹೆಚ್ಚಾಗಿದ್ದು, ಈ ಸಮಯದಲ್ಲಿ ಕಳ್ಳರು ಕರಾಮತ್ತು ತೋರುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ರಂಗಸಮುದ್ರ ಗ್ರಾಮದ ಪರ್ಲಕೋಟಿ ಜಯಪ್ರಕಾಶ್ ಎಂಬವರ ಎರಡು ಉತ್ತಮ ತಳಿಯ ನಾಯಿಗಳಿಗೆ ವಿಷವುಣಿಸಿರುವ ಕಳ್ಳರು ಪಕ್ಕದಲ್ಲಿದ್ದ ಗಂಧದ ಮರವನ್ನು ಕದಿಯುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ ಇತ್ತೀಚೆಗೆ ಗುಡ್ಡೆಹೊಸೂರು ಶಾಲೆ, ಬಸವನಹಳ್ಳಿ, ಬೆಟ್ಟಗೇರಿ ಅಂಗಡಿಗಳಲ್ಲೂ ವಿದ್ಯುತ್ ಇಲ್ಲದ ಸಂದರ್ಭ ಕಳವು ನಡೆದಿದೆ. -ಗಣೇಶ್ ಕುಡೆಕಲ್