ಸೋಮವಾರಪೇಟೆ, ಅ. ೨೬: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮೂಲಕ ಆಗಮಿಸಿರುವ ಸುಧಾರಿತ ಸೌಕರ್ಯಗಳನ್ನು ಒಳಗೊಂಡಿರುವ ಆಂಬ್ಯುಲೆನ್ಸ್ಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ಸುಮಾರು ೩೩ ಲಕ್ಷ ಮೌಲ್ಯದ ನೂತನ ಆಂಬ್ಯುಲೆನ್ಸ್ನಲ್ಲಿ ಆಧುನಿಕ ಸಲಕರಣೆಗಳಿದ್ದು, ರೋಗಿಗಳನ್ನು ಸಾಗಾಟಗೊಳಿಸಲು ಹೆಚ್ಚಿನ ಅನುಕೂಲವಾಗಿದೆ. ರಾಜ್ಯ ಸರ್ಕಾರ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನೂತನ ಆಂಬ್ಯುಲೆನ್ಸ್ಗಳನ್ನು ಒದಗಿಸುತ್ತಿದೆ. ಸೋಮವಾರಪೇಟೆಯಲ್ಲಿ ಇದೀಗ ೫ ಆಂಬ್ಯುಲೆನ್ಸ್ಗಳು ಸೇವೆಗೆ ಲಭ್ಯವಿದೆ ಎಂದು ರಂಜನ್ ತಿಳಿಸಿದರು.
ಈ ಆಂಬ್ಯುಲೆನ್ಸ್ನಲ್ಲಿ ೨ ಸಿಲಿಂಡರ್ ಸಾಮರ್ಥ್ಯದ ಆಕ್ಸಿಜನ್ ಘಟಕ, ವೆಂಟಿಲೇಟರ್, ಬಿ.ಪಿ. ಆಪರೇಟಿಂಗ್ ಸಿಸ್ಟಮ್, ಮಾನಿಟರ್ ಒಳಗೊಂಡಿದ್ದು, ತುರ್ತು ಸಮಯದಲ್ಲಿ ಸತತ ೮ ಗಂಟೆಗಳ ಕಾಲ ರೋಗಿಯನ್ನು ಆಕ್ಸಿಜನ್ ಸಹಿತ ಸಾಗಾಟಗೊಳಿಸಬಹುದಾಗಿದೆ. ಇದರಿಂದಾಗಿ ಅತೀ ತುರ್ತು ಸಂದರ್ಭ ಮಂಗಳೂರು, ಮೈಸೂರು, ಬೆಂಗಳೂರಿಗೂ ತೆರಳಬಹುದಾಗಿದೆ ಎಂದರು.
ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಆಸ್ಪತ್ರೆಯ ವೈದ್ಯರುಗಳಾದ ಡಾ. ಶಿವಪ್ರಸಾದ್, ಡಾ. ಸತೀಶ್ ಸೇರಿದಂತೆ ಇತರ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು, ಆಂಬ್ಯುಲೆನ್ಸ್ ಚಾಲಕ ಅರುಣ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಬಿ.ಆರ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.