ಶನಿವಾರಸಂತೆ, ಅ. ೨೫: ಮನೆ ಗೋಡೆಗೆ ಒತ್ತಾಗಿ ನೀರಿನ ಪೈಪ್ ಹಾಕಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಪಕ್ಕದ ಮನೆಯ ತಾಯಿ ಮತ್ತು ಮಗ ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಸಮೀಪದ ಸುಳುಗಳಲೆ ಕಾಲೋನಿಯಲ್ಲಿ ನಡೆದಿದೆ.

ಗಂಗಮ್ಮ ಹಲ್ಲೆಗೊಳಗಾದ ಮಹಿಳೆ. ಈಕೆ ತನ್ನ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದರು. ಕಾಂತರಾಜ್ ಮತ್ತು ಆತನ ತಾಯಿ ಮಲ್ಲಿಗೆ ಆರೋಪಿಗಳು. ಗಂಗಮ್ಮ ಮತ್ತು ಮಗ ಮನೆಯಲ್ಲಿ ಇಲ್ಲದ ಸಮಯದಲ್ಲಿ ಪೈಪ್ ಅಳವಡಿಸಿದ್ದನ್ನು ವಿಚಾರಿಸಿದ್ದಕ್ಕೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದರು ಎನ್ನಲಾಗಿದೆ. ಹಲ್ಲೆ ಸಂದರ್ಭ ಗಂಗಮ್ಮ ಅವರ ಕೂಗಾಟ ಕೇಳಿ ನೆರೆ ಮನೆಯ ಕಲ್ಪನಾ ಎಂಬವರು ಧಾವಿಸಿ ಜಗಳ ಬಿಡಿಸಿದ್ದಾರೆ. ಗಂಗಮ್ಮ ಅವರ ಹಿರಿಯ ಮಗ ಧರ್ಮಪ್ಪಗೆ ಫೋನ್ ಕರೆ ಮಾಡಿದ್ದಾರೆ. ನಂತರ ಇಬ್ಬರೂ ಸೇರಿ ಗಾಯಾಳು ಗಂಗಮ್ಮ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.