ಮಡಿಕೇರಿ, ಅ. ೨೪: ಜಿಲ್ಲೆಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ಕೊಡವ ಚಲನಚಿತ್ರ “ನಾಡ ಪೆದ ಆಶಾ” ಚೇರಂಬಾಣೆ ಕೊಡವ ಸಮಾಜದಲ್ಲಿ ಪ್ರದರ್ಶನಗೊಂಡಿತು. ಚೇರಂಬಾಣೆ ಬೇಂಗ್‌ನಾಡ್ ಕೊಡವ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಕೊಡವ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರ ಪ್ರೋತ್ಸಾಹದ ಅಗತ್ಯವಿದೆ ಎಂದರು. “ನಾಡ ಪೆದ ಆಶಾ” ಚಿತ್ರ ಉತ್ತಮ ರೀತಿಯಲ್ಲಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡವ ಸಮಾಜದ ಮಾಜಿ ಅಧ್ಯಕ್ಷ ಕುಟ್ಟೇಟಿರ ಮಣಿ ಕುಞಪ್ಪ, ಕೊಟ್ಟುಕತ್ತಿರ ಸಾಬು ತಿಮ್ಮಯ್ಯ, ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಬೆಂಗ್‌ನಾಡ್ ಕ್ಲಬ್ ಅಧ್ಯಕ್ಷ ಪಟ್ಟಮಾಡ ಕುಶಾಲಪ್ಪ, ಚಿತ್ರದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಮಾತನಾಡಿದರು. ಬಾಲನಟಿ ಈರಮಂಡ ಕುಶಿ ಕಾವೇರಮ್ಮ ಪ್ರಾರ್ಥಿಸಿ, ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಪ್ರೇಕ್ಷಕರು “ನಾಡ ಪೆದ ಆಶಾ” ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.