ಕುಶಾಲನಗರ ಅ ೨೪: ತಲಕಾವೇರಿಯಿಂದ ಪೂಂಪ್‌ಹಾರ್‌ಗೆ ತೆರಳುವ ಕಾವೇರಿ ನದಿ ಜಾಗೃತಿ ಯಾತ್ರೆ ತಂಡ ಕುಶಾಲನಗರ ಮಾರ್ಗವಾಗಿ ಶನಿವಾರ ಜಿಲ್ಲೆಯ ಗಡಿ ದಾಟಿ ರಾಮನಾಥಪುರದತ್ತ ಸಾಗಿತು.

ತಲಕಾವೇರಿಯಲ್ಲಿ ಚಾಲನೆ ಗೊಂಡ ರಥ ಯಾತ್ರೆ ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಕಾರ್ಯಕರ್ತರು ಸಾಂಪ್ರದಾಯಿಕ ವಾಗಿ ಬರಮಾಡಿಕೊಂಡರು.

ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕಾವೇರಿಯ ವಿಗ್ರಹಕ್ಕೆ ಅಭಿಷೇಕ ಪೂಜಾ ವಿಧಿವಿಧಾನಗಳು ಜರಗಿದವು .

ಈ ಸಂದರ್ಭ ಮಾತನಾಡಿದ ಶ್ರೀಗಳು ನದಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವುದೇ ಸಂದರ್ಭ ನದಿ ನೇರವಾಗಿ ಕಲುಷಿತವಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕಾಗಿದೆ. ಆ ಮೂಲಕ ಸ್ವಚ್ಛ ಕಾವೇರಿ ನಿರ್ಮಾಣ ಮಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದರು.

ಕುಶಾಲನಗರದ ಹಿರಿಯ ಅರ್ಚಕ ಕೃಷ್ಣಮೂರ್ತಿ ಭಟ್ ಮತ್ತು ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘದ ಪ್ರಧಾನ ಕಾರ್ಯದರ್ಶಿ ವೇ. ಬ್ರ. ಸೋಮಶೇಖರ ಶಾಸ್ತಿç ಅವರುಗಳು ಪೂಜಾ ವಿಧಿವಿಧಾನ ನೆರವೇರಿಸಿದರು. ನಂತರ ಕಾವೇರಿಗೆ ಮಹಾ ಆರತಿ ಬೆಳಗಲಾಯಿತು

ಈ ಸಂದರ್ಭ ಮಹಾ ಆರತಿ ಬಳಗದ ಸಂಚಾಲಕ ವನಿತಾ ಚಂದ್ರಮೋಹನ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರಾದ ಎಂ ಎನ್ ಚಂದ್ರಮೋಹನ್, ಎಂ ಎನ್ ಕುಮಾರಸ್ವಾಮಿ, ಸಿದ್ದರಾಜು ಮತ್ತಿತರರು ಇದ್ದರು.

ನಂತರ ಸಾಧುಸಂತರ ತಂಡ ಮತ್ತು ರಥ ಪ್ರಯಾಣವನ್ನು ಕೂಡಿಗೆ -ಕಣಿವೆ ಮಾರ್ಗವಾಗಿ ರಾಮನಾಥಪುರಕ್ಕೆ ಮುಂದು ವರೆಸಿದರು.