ವೀರಾಜಪೇಟೆ, ಅ. ೨೪: ಪ್ರಸ್ತುತ ಸಮಾಜದಲ್ಲಿ ಪ್ರತಿಯೊಬ್ಬರೂ ಕಾನೂನು ಅರಿವು ಹೊಂದಿರುವುದು ಅತ್ಯಗತ್ಯವಾಗಿದೆ ಎಂದು ವಕೀಲ ನರೇಂದ್ರ ಕಾಮತ್ ಅಭಿಪ್ರಾಯ ಪಟ್ಟರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆಯ ವಕೀಲರ ಸಂಘ ಮತ್ತು ಅಮ್ಮತ್ತಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಎನ್.ಎಸ್. ಪ್ರಶಾಂತ್ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿದರು. ಅಮ್ಮತ್ತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ವೈ. ಜಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಹೇಮಾವತಿ ಹಾಗೂ ಪಂಚಾಯಿತಿ ಉಪಾಧ್ಯಕ್ಷೆ ಪಿ.ಎಸ್. ಶಾಂತ ಇದ್ದರು.

ಗ್ರಾಮ ಪಂಚಾಯತಿ ಸದಸ್ಯರಾದ ಸಿ.ಎಂ. ನಾಚಪ್ಪ, ಅಶ್ವಿನಿ, ಸುಗುಣ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ವಿವಿಧ ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.