ಶನಿವಾರಸಂತೆ, ಅ. ೨೩: ಸಾಲಬಾಧೆಯಿಂದ ಮನನೊಂದು ರೈತರೊಬ್ಬರು ಮದ್ಯದೊಂದಿಗೆ ವಿಷ ಬೆರೆಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದಲ್ಲಿ ನಡೆದಿದೆ.

ರೇವಣ್ಣ (೬೦) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಕಾಫಿ, ಕಾಳುಮೆಣಸು, ಶುಂಠಿ ವ್ಯವಸಾಯದ ಜೊತೆಗೆ ಹೈನುಗಾರಿಕೆಯನ್ನು ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದರು. ಇದಕ್ಕಾಗಿ ಬ್ಯಾಂಕ್, ಸಂಘ-ಸAಸ್ಥೆಗಳು ಹಾಗೂ ಹಲವಾರು ಕಡೆ ಕೈಸಾಲವನ್ನೂ ಮಾಡಿಕೊಂಡಿದ್ದರು. ಮಗಳ ಮದುವೆ ಹಾಗೂ ಮನೆಕಟ್ಟಲು ಮಾಡಿದ್ದ ಸಾಲವೂ ಬಾಕಿಯಿತ್ತು. ಶುಂಠಿ ಬೆಳೆಗೂ ಉತ್ತಮ ದರ ಸಿಗದೇ ನಷ್ಟ ಅನುಭವಿಸಿದ್ದರು. ಇದರಿಂದ ಜೀವನದಲ್ಲಿ ಅಭಿವೃದ್ಧಿ ಕಾಣಲಾಗುತ್ತಿಲ್ಲ ಎಂಬ ಚಿಂತೆಗೀಡಾಗಿದ್ದು, ಕುಟುಂಬ ದವರೊಂದಿಗೆ ಹೇಳಿಕೊಂಡು ದುಃಖಿಸುತ್ತಿದ್ದರು ಎನ್ನಲಾಗಿದೆ.

ಶುಕ್ರವಾರ ರಾತ್ರಿ ಮನೆಯ ತಾರಸಿಯ ಮೇಲೆ ಕುಳಿತು ವಿಷ ಸೇವನೆ ಮಾಡುತ್ತಿದ್ದು, ಊಟಕ್ಕೆ ಕರೆಯ ಲೆಂದು ಮೇಲೆ ಹೋಗಿ ನೋಡಿದಾಗ ರೇವಣ್ಣ ಅಸ್ವಸ್ಥರಾಗಿದ್ದರು. ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯು ವಷ್ಟರಲ್ಲಿ ರೇವಣ್ಣ ಮೃತಪಟ್ಟಿದ್ದರು.

ವಿಪರೀತ ಸಾಲವಿದ್ದು, ತೀರಿಸಲಾಗದೇ ಮನನೊಂದು ಮದ್ಯಪಾನದೊಂದಿಗೆ ಯಾವುದೋ ವಿಷ ಸೇವಿಸಿ ತಂದೆ ಮೃತಪಟ್ಟಿರುತ್ತಾರೆ ಎಂದು ಮಗ ಹರ್ಷಿತ್ ಶನಿವಾರ ನೀಡಿದ ದೂರಿನ ಅನ್ವಯ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.