ಸುಂಟಿಕೊಪ್ಪ, ಅ. ೨೪: ಕಂಬಿಬಾಣೆ, ೭ನೇ ಹೊಸಕೋಟೆ ಹಾಗೂ ಕೊಡಗರಹಳ್ಳಿ ಗ್ರಾಮಸ್ಥರು ಕೊಡಗರಹಳ್ಳಿ - ಚಿಕ್ಲಿಹೊಳೆ ರಸ್ತೆ ದುರಸ್ತಿಗಾಗಿ ಹಮ್ಮಿಕೊಳ್ಳಲಾಗಿದ್ದ ರಸ್ತೆತಡೆ ಚಳುವಳಿಗೆ ಪೊಲೀಸರು ಅನುಮತಿ ನೀಡದೆ ಇರುವುದರಿಂದ ಸಾಂಕೇತಿಕವಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಂಬಿಬಾಣೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೆ ಬೇಡಿಕೆ ಈಡೇರಿಸುವ ತನಕ ಸಂಬAಧಪಟ್ಟವರ ಗಮನ ಸೆಳೆಯುವಂತೆ ನಿರ್ಧರಿಸಲಾಯಿತು.
ಕಂಬಿಬಾಣೆ ಚಿಕ್ಲಿಹೊಳೆ ರಸ್ತೆ ಹೋರಾಟ ಸಮಿತಿ ಸಂಚಾಲಕ ಲವಶಾಂತಪ್ಪ ಮಾತನಾಡಿ, ತೀರಾ ಹದಗೆಟ್ಟು ಹೋಗಿರುವ ಈ ರಸ್ತೆ ಕಾಮಗಾರಿಗೆ ಕಾವೇರಿ ನೀರಾವರಿ ನಿಗಮದ ಅಭಿಯಂತರರಿಗೆ ಮನವಿ ಸಲ್ಲಿಸಲಾಗಿತ್ತು. ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ೧ ವಾರದಲ್ಲಿ ನಡೆಸಲಾಗುವುದೆಂದು ಭರವಸೆ ನೀಡಿದರೂ ಇದುವರೆಗೆ ಏನೂ ಕ್ರಮ ಕೈಗೊಂಡಿಲ್ಲ. ಮತ್ತೆ ಮನವಿ ಸಲ್ಲಿಸಿ ದಾಗ ರಸ್ತೆ ದುರಸ್ತಿಗೆ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಉತ್ತರ ನೀಡಿದ್ದರು. ರಸ್ತೆ ದುರಸ್ತಿಗೆ ಒತ್ತಾಯಿಸಿ ಪಕ್ಷಾತೀತ ಹೋರಾಟ ಮುಂದಾಗಿದ್ದೆವು. ರಸ್ತೆ ಸರಿಪಡಿಸಿ ಕೊಡಲು ಜಿಲ್ಲಾಡಳಿತ ಜನಪ್ರತಿ ನಿಧಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಂಬಿಬಾಣೆ ಗ್ರಾ.ಪಂ. ಸದಸ್ಯ ಕೃಷ್ಣ ಮಾತನಾಡಿ ನಮ್ಮ ಊರಿಗೆ ರಸ್ತೆಬೇಕು, ಜನಪ್ರತಿನಿಧಿಗಳು ಅಧಿಕಾರಿಗಳು ರಸ್ತೆ ಸರಿಪಡಿಸಲು ಮುಂದಾಗದಿದ್ದರೆ. ಹಾರಂಗಿಯಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಉಪವಾಸ, ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಜವಹಾರ್ ಮಾತನಾಡಿದರು. ಸುಭಾಷ್ ಯುವಕ ಸಂಘದ ಅಧ್ಯಕ್ಷ ಗಣೇಶ, ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲಾ (ಅವಲಕುಟ್ಟಿ), ಮಾಜಿ ಗ್ರಾ.ಪಂ. ಅಧ್ಯಕ್ಷ ಚಂದ್ರಹಾಸ ರೈ, ಆಟೋ ಚಾಲಕರು, ವಾಹನಗಳ ಚಾಲಕರು ಹಾಗೂ ಗ್ರಾಮಸ್ಥರು ಇದ್ದರು.