ಮಡಿಕೇರಿ, ಅ. ೨೩: ಮಡಿಕೇರಿ ಪೊಲೀಸ್ ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ಇತ್ತೀಚೆಗೆ ನಡೆಸಿದ್ದ ಕಾರ್ಯಾಚರಣೆಯೊಂದರಲ್ಲಿ ವಶಪಡಿಸಿಕೊಳ್ಳಲಾಗಿದ್ದ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಒಟ್ಟು ೬ ಕೆ.ಜಿ.ಯಷ್ಟಾಗಿದೆ. ಕೆಲದಿನಗಳ ಹಿಂದೆ ಈ ಕಾರ್ಯಾಚರಣೆ ನಡೆದಿದ್ದು, ಬಳಿಕ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಮಾರುತಿ ವ್ಯಾನ್ (ಕೆಎ ೧೨ ಎಂ ೨೪೪೨) ಅನ್ನು ವಶಕ್ಕೆ ಪಡೆಯಲಾಗಿದೆ.
ಮಡಿಕೇರಿ ತಾಲೂಕಿನ ಮಕ್ಕಂದೂರು-ಮಡಿಕೇರಿ ರಸ್ತೆ ಬಳಿ ಸೋಮವಾರಪೇಟೆಯ ಕರೀಂಬೇಗ್ ಎಂ.ಯು. ಮತ್ತು ಅಬ್ದುಲ್ ಶರೀಫ್ ಎಂಬವರು ಅಕ್ರಮವಾಗಿ ಇದರ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ ನಡೆಸಿತ್ತು. ಇದು ಭಾರೀ ಬೆಲೆಬಾಳುವ ವಸ್ತುವಾಗಿದ್ದು, ಇದರ ಸಾಗಾಟ-ಮಾರಾಟ ಅಕ್ರಮವಾಗಿದೆ.
ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕರಾದ ಕೆ.ವಿ. ಶರತ್ಚಂದ್ರ ನಿರ್ದೇಶನದಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಎಸ್. ಸುರೇಶ್ ಬಾಬು ಮಾರ್ಗ ದರ್ಶನದಲ್ಲಿ ಪಿಎಸ್ಐ ಸಿ.ಯು. ಸವಿ, ಹೆಡ್ಕಾನ್ಸ್ಟೇಬಲ್ ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಚಾಲಕ ಮೋಹನ್ ಹಾಗೂ ಸೋಮವಾರಪೇಟೆ ಅರಣ್ಯ ಸಂಚಾರಿದಳದ ಪಿಎಸ್ಐ ಎಂ.ಡಿ. ಅಪ್ಪಾಜಿ, ಸಿಬ್ಬಂದಿಗಳಾದ ಚಂಗಪ್ಪ, ಗಣೇಶ್ ಪಾಲ್ಗೊಂಡಿದ್ದರು.