ಗೋಣಿಕೊಪ್ಪಲು, ಅ. ೨೨: ವಿದ್ಯುತ್ ಇಲಾಖೆಯು ರೈತರಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ತಾ. ೨೫ ರಂದು ಮಡಿಕೇರಿಯ ಸೆಸ್ಕ್ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದ್ದಾರೆ.

ರೈತ ಸಂಘದ ಕೇಂದ್ರ ಕಚೇರಿ ಗೋಣಿಕೊಪ್ಪಲುವಿನಲ್ಲಿ ಆಯೋಜನೆ ಗೊಂಡಿದ್ದ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯುತ್ ಇಲಾಖೆಯು ರೈತರ ವಿದ್ಯುಚ್ಛಕ್ತಿಗಳನ್ನು ಕೆಲವು ನೆಪವೊಡ್ಡಿ ನಿಲುಗಡೆ ಗೊಳಿಸುತ್ತಿದೆ. ೧೦ ಹೆಚ್.ಪಿ.ಗಿಂತ ಕಡಿಮೆ ಇರುವ ರೈತರ ಪಂಪ್‌ಸೆಟ್ ಗಳಿಗೆ ಬಿಲ್‌ಗಳನ್ನು ವಿಧಿಸುತ್ತಿದೆ. ರೈತರ ವಿದ್ಯುಚ್ಛಕ್ತಿಯನ್ನು ಕಡಿತಗೊಳಿಸಿ ಅನ್ಯಾಯ ಮಾಡುತ್ತಿದೆ. ಅಲ್ಲದೆ ಗುಣಮಟ್ಟದ ವಿದ್ಯುಚ್ಛಕ್ತಿ ಯನ್ನು ನೀಡದೆ ಜನರನ್ನು ಕತ್ತಲೆಯಲ್ಲಿ ಇರುವಂತೆ ಮಾಡಿದೆ. ಕೂಡಲೇ ಸರ್ಕಾರ ಹಾಗೂ ವಿದ್ಯುತ್ ಇಲಾಖೆ ಇವುಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಕೇಂದ್ರ ಮಡಿಕೇರಿಯ ಸೆಸ್ಕ್ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ಜಿಲ್ಲೆಯ ೫ ತಾಲೂಕಿನ ರೈತರು, ಬೆಳೆಗಾರರು ಹಾಗೂ ನಾಗರಿಕರು ಭಾಗವಹಿಸಲಿದ್ದಾರೆ ಎಂದರು.

ಇಲಾಖೆಯು ವಿವಿಧ ಹೋಬಳಿಗಳಲ್ಲಿ ಉಪ ವಿದ್ಯುತ್ ಕೇಂದ್ರಗಳನ್ನು ತೆರೆಯುವಲ್ಲಿ ವಿಫಲವಾಗಿದೆ. ರೈತ ಸಂಘವು ಹಲವು ಸಭೆಯಲ್ಲಿ ಈ ಬಗ್ಗೆ ಒತ್ತಾಯಪಡಿಸಿದ್ದರೂ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇರುವ ವಿದ್ಯುತ್ ಕೇಂದ್ರಗಳನ್ನು ಉತ್ತಮ ಗುಣಮಟ್ಟಕ್ಕೆ ಏರಿಸುತ್ತಿಲ್ಲ.

ಹಲವು ಯೋಜನೆಗಳಿಗೆ ಇನ್ನೂ ಕೂಡ ಟೆಂಡರ್ ಪ್ರಕ್ರಿಯೆ ನಡೆಸಲು ಇಲಾಖೆ ಮುಂದೆ ಬಂದಿಲ್ಲ. ಕೂಡಲೇ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು.

ಮುಂದಿನ ದಿನದಲ್ಲಿ ಗುಣಮಟ್ಟದ ವಿದ್ಯುತ್‌ನ್ನು ಗ್ರಾಹಕರಿಗೆ ನೀಡಲು ಇಲಾಖೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಪ್ರತಿ ತಾಲೂಕಿನ ಮುಖ್ಯ ವಿದ್ಯುತ್ ಕಚೇರಿಗೆ ಬೀಗ ಜಡಿಯುವ ಮೂಲಕ ಪ್ರತಿಭಟನೆ ಮಾಡಲಾಗುವುದು. ತಾ. ೨೫ ರಂದು ರಾಜಕೀಯ ರಹಿತವಾಗಿ ನಡೆಯುವ ಬೃಹತ್ ಪ್ರತಿಭಟನೆಗೆ ಕೊಡಗು ಜಿಲ್ಲೆಯ ರಾಜಕೀಯ ಜನಪ್ರತಿನಿಧಿಗಳು ಆಗಮಿಸಿ ಬೆಂಬಲಿಸುವAತೆ ಮನವಿಯನ್ನು ಸ್ವೀಕರಿಸುವಂತೆ ಮನು ಸೋಮಯ್ಯ ಕೋರಿದರು.

ರೈತರ ವಿದ್ಯುಚ್ಛಕ್ತಿ ಬಿಲ್ಲ್ನ್ನು ಕಟ್ಟಲು ಇಲಾಖೆಯು ನಿರಂತರವಾಗಿ ಕಿರುಕುಳ ನೀಡುತ್ತಿರುವುದರಿಂದ ರೈತ ಕಂಗಾಲಾಗಿದ್ದಾನೆ. ಅಲ್ಲದೆ ಸಾಲದಲ್ಲಿ ಮುಳುಗಿ ಆತ್ಮಹತ್ಯೆ ದಾರಿ ಹಿಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಅನಾಹುತಕ್ಕೆ ಮೊದಲೇ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಸಮಸ್ಯೆಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ವಿವಿಧ ಪದಾಧಿಕಾರಿಗಳಾದ ಮೇಚಂಡ ಕಿಶ ಮಾಚಯ್ಯ, ತಾಣಚ್ಚಿರ ಲೆಹರ್ ಬಿದ್ದಪ್ಪ, ಎಸ್.ಎಸ್. ಸುರೇಶ್, ಪುಚ್ಚಿಮಾಡ ರಾಯ್ ಮಾದಪ್ಪ ಮುಂತಾದವರು ಉಪಸ್ಥಿತರಿದ್ದರು.