ಕೊಡ್ಲಿಪೇಟೆ, ಅ. ೨೨: ಕೊಡ್ಲಿಪೇಟೆ ಪಟ್ಟಣ ವ್ಯಾಪ್ತಿಯ ಎಲ್ಲೆಂದರಲ್ಲಿ ತ್ಯಾಜ್ಯ ಕಂಡುಬರುತ್ತಿದ್ದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯ ಗಡಿ ಭಾಗವಾಗಿರುವ ಕೊಡ್ಲಿಪೇಟೆಗೆ ದಿನನಿತ್ಯ ಸಾವಿರಾರು ಮಂದಿ ಆಗಮಿಸುತ್ತಿದ್ದು, ಪಟ್ಟಣದ ಎಲ್ಲೆಂದರಲ್ಲಿ ತ್ಯಾಜ್ಯ ಕಂಡುಬರುತ್ತಿರುವುದರಿAದ ಪಟ್ಟಣದ ಸೌಂದರ್ಯ ಮಂಕಾಗುತ್ತಿದೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ, ಸಾರ್ವಜನಿಕ ಶೌಚಾಲಯ, ಪೊಲೀಸ್ ಉಪಠಾಣೆ, ಗ್ರಂಥಾಲಯಗಳಿಗೆ ತೆರಳುವ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯದ ರಾಶಿ ಕಂಡುಬರುತ್ತಿದೆ.

ಪಕ್ಕದ ಹಾಸನ ಜಿಲ್ಲೆಗೆ ಹೊಂದಿಕೊAಡAತೆ ಕೊಡ್ಲಿಪೇಟೆ ಇರುವುದರಿಂದ ಅಂತರ್‌ಜಿಲ್ಲಾ ಸಾರ್ವಜನಿಕರ ಓಡಾಟವೂ ಅಧಿಕವಿದೆ. ಇದರೊಂದಿಗೆ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಪಟ್ಟಣ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸವಿಲೇವಾರಿ ಕೈಗೊಳ್ಳದ ಹಿನ್ನೆಲೆ ಅಲ್ಲಲ್ಲಿ ಕಸದ ಗುಡ್ಡೆಗಳು ಕಂಡುಬರುತ್ತಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಹರಿಸುವ ಮೂಲಕ ವೈಜ್ಞಾನಿಕವಾಗಿ ಕಸವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದರೊಂದಿಗೆ ಕೊಡ್ಲಿಪೇಟೆ ಪಟ್ಟಣ ವ್ಯಾಪ್ತಿಯ ಚರಂಡಿಗಳೂ ಸಹ ದುಸ್ಥಿತಿಗೆ ತಲುಪಿದ್ದು, ಕೊಳಚೆ ನೀರು ಸಂಗ್ರಹವಾಗುತ್ತಿದೆ. ಮಳೆ ಬಂದರೆ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಕಲುಷಿತ ನೀರು ಶೇಖರಣೆಯಿಂದಾಗಿ ಸೊಳ್ಳೆ ಸೇರಿದಂತೆ ಇನ್ನಿತರ ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲೂ ಪಂಚಾಯಿತಿ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.