ಕರಿಕೆ, ಅ. ೨೩: ಅಖಿಲ ಭಾರತ ಸನ್ಯಾಸಿಗಳ ಸಂಘ ಮತ್ತು ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿಯ ನೇತೃತ್ವದಲ್ಲಿ ಸ್ವಚ್ಛ ಕಾವೇರಿ ಅಭಿಯಾನದ ಸಲುವಾಗಿ ತಲಕಾವೇರಿ - ಪೂಂಪ್ ಹಾರ್ ೧೧ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ವೀರಾಜಪೇಟೆ ಅರಮೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಚೀನ ನಾಗರಿಕತೆ ಪ್ರಾರಂಭವಾಗಿದ್ದೆ ನದಿ ದಂಡೆಯಲ್ಲಿ, ನದಿ ಸ್ವಚ್ಛವಾದಲ್ಲಿ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.

ಮನುಷ್ಯ ಇದ್ದಲ್ಲಿ ಪ್ರಕೃತಿ ವಿಕೋಪ ಸಾಮಾನ್ಯ. ಇದನ್ನು ತಡೆಗಟ್ಟಲು ಪ್ರಕೃತಿಗೆ ಪೂರಕವಾಗಿ ಸ್ಪಂದಿಸಿದಲ್ಲಿ ಪ್ರಕೃತಿ ನಮಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಕೊಡಗಿನಲ್ಲಿ ದೇವರಕಾಡು ಸಂರಕ್ಷಣೆ ಆಗಿದ್ದು ಇದೇ ರೀತಿ ನದಿ ಸಂರಕ್ಷಣಾ ಕಾರ್ಯ ತ್ವರಿತವಾಗಿ ಆಗಬೇಕು. ಕ್ಷೇತ್ರದ ಶಾಸಕÀ ಕೆ.ಜಿ. ಬೋಪಯ್ಯ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ರಾಜ್ಯಾಧ್ಯಕ್ಷ ರವಿಕುಶಾಲಪ್ಪ ಅವರು ಈ ಮಹತ್ತರದ ಕಾರ್ಯಕ್ಕೆ ಕೈಜೋಡಿಸಿರುವುದು ಆಶಾದಾಯಕ ಬೆಳವಣಿಗೆ ಆಗಿದ್ದು ಸಂಘಟನೆಯ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ಯಾತ್ರೆಯ ರಥಕ್ಕೆ ಚಾಲನೆ ನೀಡಿ ಮಾತನಾಡಿ ಗಂಗಾನದಿಯ ಸ್ವಚ್ಛತಾ ಮಾದರಿಯಲ್ಲಿ ಕಾವೇರಿ ನದಿ ಸ್ವಚ್ಛತಾ ಕಾರ್ಯವಾಗಬೇಕಿದ್ದು, ನದಿಗಳ ಎರಡೂ ಬದಿಗಳಲ್ಲಿ ಒತ್ತುವರಿ ತೆರವುಮಾಡಿ ಗಿಡ ನೆಟ್ಟು ಬೆಳೆಸುವ ಕಾರ್ಯವಾಗಬೇಕಿದೆ. ಪಶ್ಚಿಮ ಘಟ್ಟಗಳು ಉಳಿದರೆ ನಾವು ಉಳಿದಂತೆ. ಈ ಬಗ್ಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ

(ಮೊದಲ ಪುಟದಿಂದ) ಮಾಡ ಲಾಗುವುದು ಎಂದರು. ೨೦೧೮ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪವನ್ನು ನೆನಪಿಸಿಕೊಂಡು ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಎದುರಿಸಬೇಕಾಗಬಹುದು ಎಂದರು.

ಕಾವೇರಿ ಸ್ವಚ್ಛತೆಯೊಂದಿಗೆ ಲಕ್ಷö್ಮಣತೀರ್ಥ ಸ್ವಚ್ಚತಾ ಕಾರ್ಯವು ನಡೆಯಬೇಕಿದೆ. ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಮುಂದಿನ ವಾರ ಅಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘಸAಸ್ಥೆಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಶಾಸಕ ಬೋಪಯ್ಯ ಅವರ ನೇತೃತ್ವದಲ್ಲಿ ಸರಕಾರದ ಮಟ್ಟದಲ್ಲಿ ವ್ಯವಹರಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಶಾಸಕ ಕೆ.ಜಿ ಬೋಪಯ್ಯ ಅವರು ಮಾತನಾಡಿ ನದಿಗಳ ಸ್ವಚ್ಛತೆಗೆ ಸರಕಾರದೊಂದಿಗೆ ಸಾರ್ವಜನಿಕರು ಕೂಡ ಕೈ ಜೋಡಿಸಿರೆ ಸ್ವಚ್ಛತಾ ಕಾರ್ಯ ಸುಲಭವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಪವಿತ್ರ ಕಾವೇರಿ ನದಿ ದೇಶದಲ್ಲಿ ಪರಮ ಪವಿತ್ರ ಸ್ಥಾನ ಪಡೆದಿದ್ದು, ಜನರ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಚಾರ. ನದಿ ಮೂಲಗಳು ಉಳಿದರೆ ಮನುಕುಲ ಉಳಿದಂತೆ. ನದಿ, ಜಲವನ್ನು ನಮ್ಮ ಪೂರ್ವಜರು ಧಾರ್ಮಿಕ ಭಾವನೆಯಿಂದ ಕಾಣುತ್ತಿದ್ದು ಇದನ್ನು ಇಂದಿನ ಯುವ ಪೀಳಿಗೆ ಮನಗಾಣಬೇಕೆಂದು ಕಿವಿಮಾತು ಹೇಳಿದರು.

ನದಿ ಸ್ವಚ್ಚತೆಯ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದು ಮುಂದಿನ ಚಳಿಗಾಲದ ಅಧಿವೇಶನ ದಲ್ಲಿ ಮತ್ತೊಮ್ಮೆ ಸರಕಾರದ ಗಮನ ಸೆಳೆದು ನದಿ ಸ್ವಚ್ಚತಾ ಕಾರ್ಯಕ್ಕೆ ಕ್ರಮ ವಹಿಸಲಾಗುವುದು. ಸರಕಾರದೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಕೂಡ ಅಗತ್ಯವೆಂದರು. ಅಲ್ಲದೇ ಈಗಾಗಲೇ ತಲಕಾವೇರಿಯಿಂದ ಭಾಗಮಂಡಲ ದವರೆಗೆ ಹೂಳೆತ್ತಲಾಗಿದ್ದು, ಬಾಕಿ ಹೂಳೆತ್ತಲು ಕಾವೇರಿ ನೀರಾವರಿ ನಿಗಮಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಸದ್ಯದಲ್ಲಿ ಅನುಮೋದನೆ ದೊರೆಯಲಿದ್ದು, ಕಾಮಗಾರಿ ಪ್ರಾಂಭಿಸಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾವೇರಿ ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಕುಶಾಲನಗರದ ಕಾವೇರಿ ರಿವರ್ ಸೇವಾ ಟ್ರಸ್ಟ್ ಮತ್ತು ತಮಿಳುನಾಡಿನ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ ನಡೆಯುತ್ತಿರುವ ಈ ಕಾರ್ಯಕ್ರಮ ೨೦೧೦ ರಿಂದ ಜೀವನದಿ ಕಾವೇರಿಯ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಮಾಮಿ ಗಂಗೆ ಸಂಚಾಲಕರಾದ ರೀನಾ ಪ್ರಕಾಶ್, ತಲಕಾವೇರಿ ದೇವಾಲಯ ತಕ್ಕರಾದ ಕೋಡಿ ಮೋಟಯ್ಯ, ವಿವಿಧ ಮಠಾಧೀಶರು, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ, ಚೈಯ್ಯಂಡ ಸತ್ಯ ಗಣಪತಿ, ಸ್ಥಳೀಯ ಪ್ರಮುಖರಾದ ಚಲನ್ ನಿಡ್ಯಮಲೆ, ರಾಜೀವ್, ಸಂಜು ಪಟ್ಟಮಾಡ, ಅಮೆ ಹರೀಶ್, ಭಾಗಮಂಡಲ ಗ್ರಾಮ ಪಂಚಾಯಿತಿ ಸದಸ್ಯ ಕಾಳನ ರವಿ, ಸಿರಕಜೆ ನಾಗೇಶ್, ತಮಿಳುನಾಡಿನ ಭಕ್ತರ ಸಮೂಹ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.

ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‌ಹಾರ್ ತನಕ ಸಾಗಲಿರುವ ಈ ಜಾಗೃತಿ ಯಾತ್ರೆಯಲ್ಲಿ ಕಾವೇರಿ ನದಿ ತಟದ ಉದ್ದಕ್ಕೂ ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ. ನಂತರ ಯಾತ್ರಾ ತಂಡ ಕೂಡಿಗೆ, ಕಣಿವೆ ಮೂಲಕ ಜಿಲ್ಲೆಯ ಗಡಿ ದಾಟಿ ರಾಮನಾಥಪುರದತ್ತ ಸಾಗಲಿದೆ. ತಂಡ ರಾಮನಾಥಪುರದಲ್ಲಿ ವಾಸ್ತವ್ಯ ಹೂಡಿ ತಾ.೨೪ ರಂದು (ಇಂದು) ಬೆಳಿಗ್ಗೆ ಶ್ರೀರಂಗಪಟ್ಟಣ ತಲಪಿ ರಾಮನಗರ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಸಾಗಿ ನವೆಂಬರ್ ೧೧ ರಂದು ಪೂಂಪ್‌ಹಾರ್‌ನಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ.

ತಲಕಾವೇರಿ ಕ್ಷೇತ್ರದಿಂದ ಪೂಜೆ ಸಲ್ಲಿಸಿ ೫ ಕಳಸಗಳಲ್ಲಿ ಒಯ್ಯುವ ಪವಿತ್ರ ಕಾವೇರಿ ತೀರ್ಥವನ್ನು ತಮಿಳುನಾಡು ಪೂಂಪ್‌ಹಾರ್ ಬಳಿ ಕಾವೇರಿ ನದಿ ಸಂಗಮವಾಗುವ ಬಂಗಾಲಕೊಲ್ಲಿ ಸಮುದ್ರದಲ್ಲಿ ವಿಸರ್ಜನೆ ಮಾಡುವ ಕಾರ್ಯ ನಡೆಯಲಿದೆ.

- ಸುಧೀರ್ ಹೊದ್ದೆಟ್ಟಿ