ವಿದ್ಯಾವಂತರು : ಈಶ್ವರನು ಪಕ್ಷಪಾತ ರಹಿತವಾಗಿ ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸುವನೋ, ಎಲ್ಲರಲ್ಲಿಯೂ ಸಮಾನ ಪ್ರೀತಿಯನ್ನು ಇಟ್ಟುಕೊಂಡಿರುವನೋ, ಅದೇ ರೀತಿ ವಿದ್ಯಾವಂತರೆಲ್ಲರೂ ಪಕ್ಷಪಾತರಹಿತ ನ್ಯಾಯ, ಸಮನಾದ ಪ್ರೀತಿಯನ್ನು ಎಲ್ಲಾ ಜೀವಿಗಳಿಗೂ ತೋರಬೇಕು. ಯುವಾವಸ್ಥೆಯನ್ನು ಪಡೆದಿರುವ ತರುಣ-ತರುಣಿಯರು ಸಮಾನ ಮನಸ್ಕರಾದ ಯುವತಿ-ಯುವಕನೊಂದಿಗೆ ವಿವಾಹವಾಗಿ ಸುಖಮಯ ಜೀವನವನ್ನು ಸಾಗಿಸುವರೋ, ಹಾಗೆಯೇ ವಿದ್ಯಾವಂತರು ಸಮಾನ ಮನಸ್ಕರಾದ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿಸಿ ಅವರ ವಿದ್ಯಾರ್ಥಿ ಜೀವನವು ಸುಖಮಯವಾಗುವಂತೆ ಮಾಡಬೇಕು.

ಯಾವ ಗೃಹಸ್ಥನು ಸುಖವನ್ನು ಅನುಭವಿಸುತ್ತಾನೆ : ಯಾವ ಗೃಹಸ್ಥನು ಹಗಲು ರಾತ್ರಿಗಳಂತೆ ಇರುವವನಾಗಿ ವಿದ್ಯೆ ಅವಿದ್ಯೆಗಳ ಅಂತರವನ್ನರಿತು ಸರ್ವದಾ ಕಾರ್ಯನಿರತನಾಗಿ, ಹಸುವು ಹೇಗೆ ಎಲ್ಲಾ ಪ್ರಾಣಿಗಳಿಗೂ ಉಪಕಾರಿಯೋ ಅದರಂತೆ ಎಲ್ಲರಿಗೂ ಉಪಕಾರಿಯಾಗಿ ದುಷ್ಟರನ್ನು ಜಯಿಸಿ ಅಜಾತ ಶತ್ರುವಿನಂತೆ ಜೀವನ ನಡೆಸುವನೋ, ಅಂತಹ ಗೃಹಸ್ಥನ ಸಂಸಾರವು ಹಾಲಿನೊಡನೆ ತುಪ್ಪ ಬೆರೆಸಿದಂತೆ ಅತ್ಯಂತ ಸವಿಯಾದದ್ದು ಆಗುತ್ತದೆ.

ಮೇಘವು ಜೀವರಾಶಿಗಳನ್ನು ಪೋಷಿಸುತ್ತದೆ: ತಾಯಿಯು ಶಿಶುವನ್ನು ಪೋಷಿಸುವಂತೆ, ಮೇಘವು ಎಲ್ಲಾ ಜೀವರಾಶಿಗಳನ್ನು ಪೋಷಿಸುತ್ತದೆ. ಸೂರ್ಯ, ವಿದ್ಯುತ್ ಮತ್ತು ಗಾಳಿ ಈ ಮೇಘವನ್ನು ಪೋಷಿಸುತ್ತವೆ. ಸೂರ್ಯ, ವಿದ್ಯುತ್, ಗಾಳಿ ಮೇಘವನ್ನು ಪೋಷಿಸದಿದ್ದರೆ ಮೇಘವು ಜೀವರಾಶಿಗಳನ್ನು ಪೋಷಿಸ ದಿದ್ದರೆ ಈ ಜೀವರಾಶಿಗಳ ಅಸ್ತಿತ್ವವು ಹೇಗೆ ಕಲ್ಪನಾತೀತ ವಾಗುತ್ತಿತ್ತು.

ಯಾರು ಬಲಿಷ್ಠರಾಗುತ್ತಾರೆ : ಯಾರು ಸೂರ್ಯನ ಬೆಳಕಿಗೆ ಸಮನಾಗಿ ವಿದ್ಯೆಯ ಬೆಳಕನ್ನು ಚೆಲ್ಲುತ್ತಾರೋ ಮತ್ತು ತನ್ನ ಆತ್ಮನಿಗೆ ಸಮನಾಗಿ ಎಲ್ಲರನ್ನೂ ಗೌರವಿಸುತ್ತಾರೋ, ಅವರೇ ಬಲಿಷ್ಠರಾಗುತ್ತಾರೆ.

ಯಾರು ವಿಜಯಿಯಾಗುತ್ತಾರೆ : ಯಾವ ರಾಜರು ಸಂಪೂರ್ಣ ರೀತಿಯಲ್ಲಿ ಅಧ್ಯಾಪಕರನ್ನು ವಿದ್ಯಾ ಪ್ರಚಾರ ಕಾರ್ಯದಲ್ಲಿ ಪ್ರವೃತ್ತರಾಗುವಂತೆ ಮಾಡುತ್ತಾರೋ, ಅವರ ಮಹಿಮೆಯನ್ನು ವೃದ್ಧಿಪಡಿಸುತ್ತಾರೋ ಮತ್ತು ಯಾರು ಮಾಡಿದ್ದನ್ನು ಸ್ಮರಿಸಿಕೊಳ್ಳುವಂತಹ ಶೂರವೀರರನ್ನು ಸೇನೆಗೆ ಸೇರಿಸಿಕೊಂಡು ಸೇವೆಯನ್ನು ಬಲಪಡಿಸಿಕೊಳ್ಳುತ್ತಾರೋ, ಅಂತಹ ರಾಜ ಪುರುಷರು ಯಾವಾಗಲೂ ವಿಜಯಿಗಳಾಗುತ್ತಾರೆ.

ವಿದ್ಯೆಯು ಮನುಷ್ಯರಿಗೆ ಸುಖದಾಯಿನಿಯಾಗಿದೆ : ವಿದ್ಯೆಯೇ ಮನುಷ್ಯರಿಗೆ ಸುಖವನ್ನು ಕೊಡುವಂತಹದ್ದಾಗಿದೆ. ವಿದ್ಯಾಧನವನ್ನು ಪಡೆದವನು ಬಾಹ್ಯಿಕ ಜೀವನದಲ್ಲಿ ದರಿದ್ರನಂತೆ ಕಂಡುಬAದರೂ ಆಂತರಿಕ ಜೀವನದಲ್ಲಿ ಅತ್ಯಂತ ಸಿರಿವಂತನಾಗಿರುತ್ತಾನೆ. ಆದ್ದರಿಂದ ಎಲ್ಲರೂ ವಿದ್ಯಾ ಧನವನ್ನು ಗಳಿಸುವತ್ತ ಪ್ರಯತ್ನಶೀಲರಾಗಬೇಕು.

ಅನ್ನದ ಗುಣ: ಯಾವನು ಬಹುವಿಧವಾದ ಅನ್ನಗಳನ್ನು ಉತ್ತಮ ರೀತಿಯಲ್ಲಿ ಸಂಸ್ಕಾರಗೊಳಿಸಿ ಅವುಗಳ ಗುಣಗಳನ್ನು ತಿಳಿದುಕೊಂಡು ಯಥಾಯೋಗ್ಯ ರೀತಿಯಲ್ಲಿ ಸೇವಿಸುತ್ತಾನೆಯೋ, ಅವನು ಧರ್ಮಾಚರಣೆಯನ್ನು ಮಾಡುವವನಾಗುತ್ತಾನೆ ಮತ್ತು ಉತ್ತಮ ಅನ್ನವನ್ನು ಸೇವಿಸುವವನು ಶರೀರ ಪುಷ್ಟಿ, ಆತ್ಮಬಲಗಳನ್ನು ಪಡೆದು ಪುರುಷಾರ್ಥ ಸಾಧನ ಮಾರ್ಗದಲ್ಲಿ ಉನ್ನತಿಯನ್ನು ಪಡೆಯುತ್ತಾನೆ.

ಎಂತಹ ಅನ್ನವನ್ನು ಸೇವಿಸಬೇಕು : ಮನುಷ್ಯರು ಮಧುರಾದಿ ರಸಗಳಿಂದ ಕೂಡಿರುವ ಸ್ವಾದಿಷ್ಟ ಅನ್ನವನ್ನೂ, ವಿವಿಧ ವ್ಯಂಜನ ಪದಾರ್ಥಗಳನ್ನೂ, ಆರ್ಯುವೇದದ ನಿಯಮವನ್ನನುರಿಸಿ ತಯಾರಿಸಿಕೊಂಡು ಊಟಮಾಡಬೇಕು. ಯಾವುದು ರೋಗನಿವಾರಕವೂ ಆಯುಷ್ಯವನ್ನು ಹೆಚ್ಚಿಸುವಂತಹದ್ದೂ, ಶರೀರೇಂದ್ರಿಯ ಬಲಗಳನ್ನು ರಕ್ಷಿಸುವಂತಹದ್ದು ಆದ ಅನ್ನವನ್ನೇ ಸೇವಿಸಬೇಕು.

ಸರ್ವಾಂಗೀಣ ಬಲವರ್ಧಕವಾದ ಪದಾರ್ಥಗಳು : ಈ ಪ್ರಪಂಚದಲ್ಲಿ ಭಗವಂತನ ನಿಯಮದಂತೆ ಲೋಕ-ಲೋಕಾಂತರಗಳಲ್ಲಿರುವ ಅಂದರೆ ಭೂಮಿ, ಜಲ, ಗಾಳಿಗೆ ಅನುಕೂಲಕರವಾಗಿ ರಸಾದಿ ಪದಾರ್ಥಗಳು ಸೃಷ್ಟಿಯಾಗಿವೆ. ಆದರೆ, ಎಲ್ಲಾ ಪದಾರ್ಥಗಳು ಎಲ್ಲಾ ಕಡೆಗಳಲ್ಲೂ, ಎಲ್ಲಾ ಕಾಲಗಳಲ್ಲೂ ಸಿಗುವುದಿಲ್ಲ. ಆದ್ದರಿಂದ ಕಾಲಕ್ಕನುಗುಣವಾಗಿ, ದೇಶಕ್ಕನುಗುಣವಾಗಿ ಮೇಲೆ ತಿಳಿಸಿರುವ ಎಲ್ಲಾ ರಸಮಯ ಪದಾರ್ಥಗಳನ್ನು ಸೇವಿಸುವುದರಿಂದ ಶರೀರಬಲ, ಆತ್ಮಬಲ ಇವೆರಡೂ ವೃದ್ಧಿ ಹೊಂದುತ್ತವೆ.

ಎಲ್ಲಾ ಪದಾರ್ಥಗಳನ್ನು ಕೊಡುವವನು ಆ ಪರಮಾತ್ಮನೇ ಆಗಿದ್ದಾನೆ : ಎಲ್ಲಾ ಪದಾರ್ಥಗಳಲ್ಲಿಯೂ ವ್ಯಾಪಿಸಿಕೊಂಡಿರುವ ಈಶ್ವರನೇ ಎಲ್ಲರಿಗೂ ಅನ್ನಾದಿ ಪದಾರ್ಥಗಳನ್ನು ಕೊಡುವವನಿದ್ದಾನೆ. ಅದನ್ನು ಅನುಭವಿಸುವ ಪ್ರಾಣಿ ಮಾತ್ರಗಳಲ್ಲೂ ಅವನೇ ನೆಲೆಸಿದ್ದು ಆಯಾಯ ಶರೀರದ ರೂಪದಿಂದ ಭಿನ್ನ-ಭಿನ್ನ ರಸಗಳನ್ನು ಅವನೇ ಸ್ವೀಕರಿಸುತ್ತಾನೆ ಎಂಬದನ್ನು ಎಲ್ಲರೂ ತಿಳಿದುಕೊಳ್ಳಬೇಕು.

ಅನ್ನದ ಉತ್ಪತ್ತಿಯನ್ನು ಭಗವಂತನೇ ಮಾಡುತ್ತಾನೆ: ಅನ್ನವನ್ನು ಸೇವಿಸದಿದ್ದರೆ ಯಾವನ ಮನಸ್ಸೂ ಪ್ರಸನ್ನವಾಗುವುದಿಲ್ಲ. ಏಕೆಂದರೆ ಮನಸ್ಸು ಅನ್ನಮಯವಾಗಿರುತ್ತದೆ. ಆ ಕಾರಣದಿಂದಲೇ ಅನ್ನದ ಉತ್ಪತ್ತಿಗಾಗಿ ಮೇಘ ಗಳನ್ನು ಬಡಿದು ಮಳೆ ಸುರಿಸಿ, ಅನ್ನದ ಉತ್ಪತ್ತಿಯನ್ನು ಅನ್ನಮಯೀ ಭಗವಂತನೇ ಮಾಡುತ್ತಾನೆ ಎಂಬದನ್ನು ತಿಳಿದುಕೊಳ್ಳಬೇಕು.

ಅನ್ನರೂಪಿಯಾದ ಭಗವಂತನ ಸ್ಮರಣೆ ಮಾಡಬೇಕು : ಭಗವಂತನೇ ಅನ್ನದ ರೂಪದಲ್ಲಿರುವುದರಿಂದ ಭಕ್ಷಿಸುವ ಸಮಯದಲ್ಲಿ ಅವನನ್ನು ಸ್ಮರಿಸಿಕೊಳ್ಳಬೇಕು. ಯಾವ ಕಾರಣದಿಂದ, ಯಾವ ಭಗವಂತನ ಕೃಪೆಯಿಂದ ವಿವಿಧ ಪದಾರ್ಥಗಳಲ್ಲಿ ವಿಭಿನ್ನ ರಸಗಳೊಂದಿಗೆ ಬೇರೆ-ಬೇರೆ ದೇಶಕಾಲಗಳಲ್ಲಿ ಭಗವಂತನು ಕಾಣಿಸಿಕೊಳ್ಳುವನೋ, ಆಯಾಯ ರೂಪದಲ್ಲಿ ಆಯಾಯ ದೇಶ ಕಾಲಗಳಲ್ಲಿ ಅವನ ಸ್ಮರಣಪೂರ್ವಕ ತತ್ ತತ್ ಪದಾರ್ಥಗಳನ್ನು ಸೇವನೆ ಮಾಡಬೇಕು.

ಅನ್ನವನ್ನು ಗವ್ಯೌಷಧಿಗಳ ರಸದಿಂದ ಸಂಸ್ಕರಿಸಬೇಕು : ಅನ್ನವನ್ನು ಗವ್ಯೌಷಧಿಗಳ ರಸದಿಂದ ಸಂಸ್ಕರಿಸಿ ಅಂದರೆ ಹಾಲು, ಮೊಸರು, ತುಪ್ಪ ಮುಂತಾದ ಗವ್ಯಗಳು ಸಿಹಿ, ಕಹಿ, ಹುಳಿ ಮುಂತಾದ ಓಷಧಿಗಳು ಈ ರಸಗಳಿಂದ ಸಂಸ್ಕರಿಸಿ ಉತ್ತಮ ಅನ್ನವನ್ನು ತಯಾರಿಸಿ ಭೋಜನ ಮಾಡುವವರು ಯುಕ್ತಾಹಾರ ವಿಹಾರಗಳಿಂದ ಪರಿಪುಷ್ಪರಾಗುತ್ತಾರೆ.

ಮನುಷ್ಯನು ಅನ್ನಾದಿ ಪದಾರ್ಥಗಳನ್ನು ಸಂಸ್ಕರಿಸಿ ಸೇವಿಸಬೇಕು : ಮನುಷ್ಯರು ಅನ್ನಾದಿ ಪದಾರ್ಥಗಳನ್ನು ಅವುಗಳ ಪಾಕಕ್ಕನುಗುಣವಾಗಿ ಸೇವಿಸಿ ಬಲವನ್ನು ಹೆಚ್ಚಿಸಿಕೊಳ್ಳಬೇಕು.

ಅಗ್ನಿಯ ದೃಷ್ಟಾಂತದಿAದ ರಾಜಗುಣಗಳು : ಯಾವನು ಅಗ್ನಿಯಂತೆ ದುಷ್ಟರನ್ನು ಎಲ್ಲಾ ರೀತಿಯಿಂದಲೂ ದಂಡಿಸುತ್ತ ಶಿಷ್ಟರ ಸಂಗದಿAದ ಶತ್ರುಗಳನ್ನು ಜಯಿಸುತ್ತ ವಿದ್ಯಾವಂತರ ಸಂಗದಿAದ ವಿದ್ಯೆ ಬುದ್ಧಿವಂತಿಕೆಗಳನ್ನು ಪಡೆದುಕೊಳ್ಳುತ್ತ ಪಡೆಯಲು ಯೋಗ್ಯವಾದ ವಸ್ತುಗಳನ್ನು ಪಡೆದುಕೊಳ್ಳುತ್ತ (ತೆರಿಗೆ) ಯಾರು ಶಾಸನವನ್ನು ಮಾಡುತ್ತಾನೋ, ಅವನು ಯೋಗ್ಯ ರಾಜನೆನೆಸಿಕೊಳ್ಳುತ್ತಾನೆ.

ಧನ ಧಾನ್ಯ ಸಮೃದ್ಧಿ ಪಡೆಯುವುದು ಹೇಗೆ : ಯಾವ ಕೆಲಸಗಳಿಂದ ವಿಪುಲ ಧನದಾನ್ಯ ಪ್ರಜೆಗಳ ಇಷ್ಟಾರ್ಥ ಸುಖ ಸಾಧಿಸಲು ಸಾಧ್ಯವಾಗುತ್ತದೆಯೋ, ಅಂತಹ ಕೆಲಸಗಳನ್ನು ಪ್ರಾರಂಭಿಸಿ ನಿರಂತರ ಮುಂದುವರಿಸಿಕೊAಡು ಹೋಗುವುದು ರಾಜನ ಕರ್ತವ್ಯವಾಗಿದೆ.

ಉಪಕಾರದಿಂದ ಸತ್ಕಾರಾರ್ಹತೆ : ಈ ಜೀವ ಜಗತ್ತಿನಲ್ಲಿ ಯಾರು ಯಾರಿಗೆ ಉಪಕಾರ ಮಾಡುತ್ತಾರೋ ಅವರು ಅವರಿಂದ ಸತ್ಕಾರಾರ್ಹ ರಾಗುತ್ತಾರೆ.

ಈಶ್ವರನು ಕಾರ್ಯರೂಪ ಪ್ರಪಂಚವನ್ನು ಸೃಷ್ಟಿಸುತ್ತಾನೆ : ಈಶ್ವರನು ಇಂದ್ರಿಯಗಳಿಗೆ ಆಗೋಚರವಾದ ಅತಿ ಸೂಕ್ಷö್ಮ ಕಾರಣದಿಂದ ಕಾರ್ಯರೂಪ ವಾದ ಚಿತ್ರ ವಿಚಿತ್ರಮಯವಾದ ಕಾರ್ಯ ಪ್ರಪಂಚವನ್ನು ಸೃಷ್ಟಿಸಿ ಅವುಗಳ ರಕ್ಷಣೆ ಪೋಷಣೆ ಮಾಡುತ್ತಾನೆ. ಅವನ ಸೃಷ್ಟಿಯ ಅಂಶವಾದ ನಾವೂ ಸಹ ಆ ವಸ್ತುಗಳನ್ನು ಉಪಯೋಗಿಸಿಕೊಂಡು, ನಮಗೆ ಉಪಯುಕ್ತವಾದ ವಸ್ತುಗಳನ್ನು ಸೃಷ್ಟಿಸಿಕೊಳ್ಳಬೇಕು.

ಗಿಡಮೂಲಿಕೆಗಳ ಓಷಧಿಗಳನ್ನು ವೃದ್ಧಿಸಿಕೊಳ್ಳಬೇಕು : ಯಾರು ವನಾದಿಗಳನ್ನು ರಕ್ಷಿಸಿ ಪೋಷಿಸಿ ಗಿಡಮೂಲಿಕೆಗಳಂತಹ ಓಷಧಿಗಳನ್ನು ವೃದ್ಧಿಪಡಿಸುತ್ತಾರೋ, ಅವರು ಎಲ್ಲರಿಗೂ ಉಪಕಾರ ಯೋಗ್ಯರಾಗಿರುತ್ತಾರೆ.

ಈಶ್ವರನು ಪುಣ್ಯವಂತರಿಗೆ ರಕ್ಷಣೆ ನೀಡುತ್ತಾನೆ : ಪರಮೇಶ್ವರನು ಪುಣ್ಯಾತ್ಮರಿಗೆ ದುಷ್ಟಾಚರಣದಿಂದ ಬೇರೆ ಮಾಡಿ ಭೂಮಿಗೆ ಸಮನಾಗಿ ರಕ್ಷಣೆ ಕೊಡುತ್ತಾನೆ. ಅವನಂತೆಯೇ ವಿದ್ಯಾವಂತರು ಪಾಪಾತ್ಮರಿಗೆ ಪಾಪಾಚರಣೆಯಿಂದ ದೂರ ಮಾಡುವಂತಹ ಉತ್ತಮ ಶಿಕ್ಷಣ ಕರ್ಮಗಳನ್ನು ಬೋಧಿಸಿ ಉತ್ತಮ ವ್ಯವಹಾರಗಳಲ್ಲಿ ತೊಡಿಸಿ ಅವರ ರಕ್ಷಣೆಯನ್ನು ಮಾಡಬೇಕು.

ಈಶ್ವರನಂತೆ ವೈದ್ಯನ ಕರ್ತವ್ಯ : ಈಶ್ವರನು ವೇದವಿದ್ಯೆಗಳ ಮೂಲಕ ಅವಿದ್ಯೆ, ಅಜ್ಞಾನಗಳೆಂಬ ರೋಗವನ್ನು ಮನುಷ್ಯರಿಂದ ಬೇರೆ ಮಾಡುತ್ತಾನೋ, ಹಾಗೆಯೇ ವೈದ್ಯನು ಆರ್ಯುರ್ವೆದ ವಿದ್ಯೆಗಳಿಂದ ದೈಹಿಕ ಮಾನಸಿಕಗಳೆಂಬ ರೋಗಗಳಿಂದ ಮನುಷ್ಯರನ್ನು ಬೇರೆ ಮಾಡಿ ಅಮೃತಮಯ ಔಷಧಗಳಿಂದ ಅವರ ದೈಹಿಕ ಮತ್ತು ಮಾನಸಿಕ ಸಂಪತ್ತುಗಳನ್ನು ಹೆಚ್ಚಿಸಬೇಕು.

ವೈದ್ಯರಾಜರು ಯಾರು : ಯಾರು ಯಾವಾಗಲೂ ಜೀವಕೋಟಿಗಳ ರಕ್ಷಣೆಯಲ್ಲಿ ನಿರತರಾಗಿರುವರೋ, ಯಾರದ್ದೇ ಆಗಲಿ, ಅವರಲ್ಲಿರುವ ಭಯವನ್ನಾಗಲೀ, ದುರ್ಬಲತೆಯನ್ನಾಗಲೀ ಪ್ರಕಟಗೊಳಿಸದೇ ಚಿಕಿತ್ಸೆಯನ್ನು ನೀಡುತ್ತಾರೋ ಅವರೇ ವೈದ್ಯರಾಜರು.

(ಮುಂದುವರಿಯುವುದು)

-ಜಿ. ರಾಜೇಂದ್ರ, ಮಡಿಕೇರಿ.