ಪೊನ್ನಂಪೇಟೆ, ಅ. ೨೧: ಪೊನ್ನಂಪೇಟೆಯಿAದ ಕಿರುಗೂರು ಮಾರ್ಗವಾಗಿ ಪೊನ್ನಪ್ಪಸಂತೆಗೆ ತೆರಳುವ ರಸ್ತೆಯನ್ನು ಕಳೆದ ವರ್ಷ ಅಗಲೀಕರಣಗೊಳಿಸಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ರಸ್ತೆಯ ಎರಡೂ ಕಡೆಗೆ ಜಲ್ಲಿಕಲ್ಲು ಹಾಗೂ ಮಣ್ಣು ಹಾಕಲಾಗಿತ್ತು. ಕಾಮಗಾರಿಯ ನಿಧಾನಗತಿಯಿಂದಾಗಿ, ಮಳೆಗಾಲಕ್ಕೆ ಮುನ್ನ ಜಲ್ಲಿ ಹಾಕಿರುವ ರಸ್ತೆಗೆ ಡಾಂಬರ್ ಹಾಕಿರಲಿಲ್ಲ. ನಂತರ ಮಳೆಗಾಲ ಪ್ರಾರಂಭವಾದ ಕಾರಣ ಡಾಂಬರೀಕಾರಣ ಕಾರ್ಯ ನಿಂತು ಹೋಗಿತ್ತು. ಇತ್ತೀಚೆಗೆ ಸುರಿದ ಮಳೆಯ ಪರಿಣಾಮ ನೀರಿನ ರಭಸಕ್ಕೆ ರಸ್ತೆಗೆ ಎರಡೂ ಕಡೆ ಹಾಕಿದ್ದ ಜಲ್ಲಿಕಲ್ಲು ಹಾಗೂ ಮಣ್ಣು ಕೊಚ್ಚಿಹೋಗಿದ್ದು, ರಸ್ತೆಯ ಕೆಲವೆಡೆ ಎರಡೂ ಕಡೆ ಮಳೆಯ ನೀರಿನ ರಭಸಕ್ಕೆ ರಸ್ತೆ ಕೊರೆತ ಉಂಟಾಗಿದ್ದು, ಕೆಲವು ಕಡೆ ಸುಮಾರು ಒಂದೂವರೆ ಅಡಿಯಷ್ಟು ಆಳದ ಗುಂಡಿ ನಿರ್ಮಾಣವಾಗಿದೆ. ಜಲ್ಲಿಕಲ್ಲು ಮರಳು ಮಿಶ್ರಿತ ಮಣ್ಣು ರಸ್ತೆಯ ಮಧ್ಯದಲ್ಲಿ ಹರಡಿರುವುದರಿಂದ ಆಟೋ ಹಾಗೂ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಿನದ ಹಿಂದೆ ಜನತಾ ಕಾಲೋನಿ ಸಮೀಪ ಬೈಕ್ ಸವಾರನೊಬ್ಬ ಆ ರಸ್ತೆಯಲ್ಲಿ ಬಿದ್ದು ಗಾಯ ಮಾಡಿಕೊಡಿರುವ ಘಟನೆ ಕೂಡ ನಡೆದಿದೆ.
ರಸ್ತೆಯ ಎರಡೂ ಬದಿ ಹೊಸದಾಗಿ ಹಾಕಿದ್ದ ಮಣ್ಣು ಹಾಗೂ ಜಲ್ಲಿಕಲ್ಲು ಕೊಚ್ಚಿ ಹೋಗಿರುವುದರಿಂದ, ವಾಹನಗಳು ಕಿರಿದಾದ ರಸ್ತೆಯಲ್ಲಿ ಚಲಿಸಲು ಪರದಾಡುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರು ರಸ್ತೆ ಬದಿಯ ಗುಂಡಿಗೆ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸಂಬAಧಪಟ್ಟವರು ಕೂಡಲೇ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡು ಮುಂದೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
- ಚನ್ನನಾಯಕ