ಮಡಿಕೇರಿ, ಅ. ೨೧: ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯ ಸಾರಥ್ಯವನ್ನು ವಹಿಸುವ ಮೂಲಕ ಜಿಲ್ಲೆಯ ಮುಸ್ಲಿಂ ಸಮಾಜದ ನೂರಾರು ಅನಾಥ ಹಾಗೂ ಬಡ ಕನ್ಯೆಯರ ಸಾಮೂಹಿಕ ವಿವಾಹ ನಡೆಸಿಕೊಟ್ಟ ಕೀರ್ತಿಗೆ ಪಾತ್ರರಾಗಿ ಇತ್ತೀಚೆಗೆ ನಿಧನ ಹೊಂದಿದ ಸಂಸ್ಥೆಯ ಅಧ್ಯಕ್ಷ, ನಿವೃತ್ತ ಉಪ ತಹಶೀಲ್ದಾರ್ ಎಫ್.ಎ. ಮಹಮ್ಮದ್ ಹಾಜಿ ಅವರ ಸ್ಮರಣಾ ಸಭೆ ಸುಂಟಿಕೊಪ್ಪದಲ್ಲಿ ನಡೆಯಿತು.

ಅಲ್ಲಿನ ಎಸ್‌ಎಂಎಸ್ ಅರಬಿ ಕಾಲೇಜು ಮತ್ತು ಅಲ್ ಅಮೀನ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ವಹಿಸಿದ್ದರು.

ಎಸ್‌ಎಂಎಸ್ ಸಂಸ್ಥೆಗೆ ಕೊಡುಗೆ ನೀಡಿದ್ದ ಎಫ್.ಎ. ಹಾಜಿ ಅವರು ತಮ್ಮ ೮೬ರ ಇಳಿವಯಸ್ಸಿನಲ್ಲೂ ದಣಿವರಿಯದ ನಿಸ್ವಾರ್ಥ ಸಮಾಜ ಸೇವಕನಾಗಿ ಬಡ ಕನ್ಯೆಯರ ಕಣ್ಣೀರೊರೆಸಿದ ಪುಣ್ಯವಂತ ಎಂದು ಗಣ್ಯರು ಬಣ್ಣಿಸಿದರು. ಸಮಾಜದಲ್ಲಿ ಒಳಿತನ್ನು ಮಾಡಿದವರನ್ನು ಜನರು ಒಗ್ಗಟ್ಟಾಗಿ ಸೇರಿ ಸ್ಮರಿಸುತ್ತಾರೆ ಎಂಬುದಕ್ಕೆ ಮಹಮ್ಮದ್ ಹಾಜಿ ಅವರು ಸ್ಪಷ್ಟ ಉದಾಹರಣೆ ಎಂಬುದಾಗಿ ಪ್ರಮುಖರು ತಮ್ಮ ನುಡಿನಮನದಲ್ಲಿ ಪ್ರಸ್ತಾಪಿಸಿದರು. ಜಿಲ್ಲೆಯ ಉಪ ಖಾಝಿ ಎಮ್. ಎಮ್. ಅಬ್ದುಲ್ಲ ಫೈಝಿ ಪ್ರಾರ್ಥನಾ ಕಾರ್ಯ ನೆರವೇರಿಸಿದರು. ಉಸ್ಮಾನ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್, ಎಸ್.ಎಂ.ಎಸ್. ಕಾಲೇಜಿನ ಪ್ರಿನ್ಸಿಪಾಲ್ ಜೈನುದ್ದೀನ್ ಫೈಝಿ, ಕಾಲೇಜಿನ ಪ್ರಧಾನ ಕಾರ್ಯದರ್ಶಿ ಹುಸೈನ್, ಇಕ್ಬಾಲ್ ಮುಸ್ಲಿಯಾರ್, ಉಮರ್ ಫೈಝಿ, ಲತೀಫ್ ಹಾಜಿ ಮುಂತಾದವರು ಎಫ್.ಎ. ಹಾಜಿ ಅವರ ಸೇವೆಯನ್ನು ಸ್ಮರಿಸಿ ಮಾತನಾಡಿದರು. ಕೊಡಗರಹಳ್ಳಿಯ ಬಾಪು ಹಾಜಿ, ಅಲ್ ಅಮೀನ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲವಿ ಸ್ವಾಗತಿಸಿ ವಂದಿಸಿದರು.