ಮಡಿಕೇರಿ, ಅ.೨೨ : ಮೋಸ, ವಂಚನೆ ಮಾಡಿ ಸಿಕ್ಕಿಹಾಕಿಕೊಂಡು ಪೊಲೀಸರ ಸೆರೆ ಸಿಕ್ಕು ಬಂಧಿತನಾಗುವದು ಸಹಜ., ಆದರಿಲ್ಲಿ ಹಣ ಕೊಟ್ಟು ಮೋಸ ಹೋಗಿ ಬಳಿಕ ತಾನೇ ಪೊಲೀಸರಿಂದ ಬಂಧನಕ್ಕೊಳಗಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾದ ಘಟನೆಯೂ ನಡೆದಿದೆ. ದುಡ್ಡು ಕೊಟ್ಟು ಮೋಸ ಹೋಗಿ ಪೊಲೀಸರಿಂದ ಬಂಧನಕ್ಕೊಳಗಾದ ಅಮಾಯಕನ ಕತೆಯಿದು..!

ಪುತ್ತೂರಿನ ಅಶ್ವಿನ್ ಸಿಕ್ವೇರ ಎಂಬಿಎ ಪದವೀಧರ. ೨೦೧೭ರ ಡಿಸೆಂಬರ್‌ನಲ್ಲಿ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದು, ಅಶ್ವಿನ್ ಸಹಾಯಕ ಆಡಳಿತ ಅಧಿಕಾರಿ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಈ ಹುದ್ದೆ ಕೊಡಿಸುವದಾಗಿ ನಂಬಿಸಿದ ಪುನಿತ್ ಹಾಗೂ ಸಿರಿಲ್ ಎಂಬವರುಗಳು ಸೇರಿ ಅಶ್ವಿನ್‌ನಿಂದ ಕಿತ್ತುಕೊಂಡಿದ್ದು ರೂ. ೮.೫೦ ಲಕ್ಷ..!

ಕೆಲಸದ ಭರವಸೆ..!

ಕಾಲೇಜು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದ ಸಿರಿಲ್ ಬಳಿ ತಾನು ಸಾರಿಗೆ ಸಂಸ್ಥೆ ಉದ್ಯೋಗಕ್ಕಾಗಿ ಪರೀಕ್ಷೆ ಬರೆದಿರುವ ಬಗ್ಗೆ ಹೇಳಿಕೊಂಡಿದ್ದಾನೆ. ತನಗೆ ಬೆಂಗಳೂರಿನ ಸಾರಿಗೆ ಕೇಂದ್ರ ಕಚೇರಿಯಲ್ಲಿ ಪರಿಚಿತರಿದ್ದು, ಕೆಲಸ ಮಾಡಿಸಿಕೊಡುವ ಭರವಸೆ ನೀಡಿದ್ದಾನೆ. ಅಲ್ಲದೆ, ಈ ಕೆಲಸ ಕೊಡಿಸುವದಕ್ಕೆ ರೂ. ೮.೫೦ ಲಕ್ಷದ ಬೇಡಿಕೆ ಇಟ್ಟಿದ್ದಾನೆ. ಪುತ್ತೂರಿನಲ್ಲೂ ಒಂದಿಷ್ಟು ರಾಜಕೀಯ ಪ್ರಬಾವ ಇರುವ ಸಿರಿಲ್‌ನನ್ನು ನಂಬಿದ ಅಶ್ವಿನ್ ಮೊದಲ ಕಂತಿನಲ್ಲಿ ರೂ. ೪ ಲಕ್ಷ ನೀಡಿದ್ದು, ಉಳಿದ ಹಣವನ್ನು ಕೆಲಸ ಸಿಕ್ಕಿದ ಮೇಲೆ ನೀಡುವದಾಗಿ ಹೇಳಿದ್ದಾರೆ.