ಕಡಂಗ, ಅ. ೨೧: ಕಡಂಗ ಸಮೀಪದ ಕರಡ ಮತ್ತು ಪಾಲಂಗಾಲ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಳೆದ ೧೫ ವರುಷಗಳಿಂದ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಕಂಗೆಟ್ಟಿದ್ದು, ಪ್ರತಿನಿತ್ಯ ಕಾಡಾನೆಗಳು ಭತ್ತದ ಪೈರನ್ನು ತಿಂದು ನಾಶಪಡಿಸುತ್ತಿದ್ದು, ಕಾಫಿ, ಬಾಳೆ, ತೆಂಗು, ಅಡಿಕೆ ಬೆಳೆಗಳು ಕಾಡಾನೆಗಳ ಪಾಲಾಗುತ್ತಿವೆ. ಕಾಡಾನೆ ಕಾರ್ಯಾಚರಣೆ ಮೂಲಕ ಆನೆಗಳನ್ನು ಸೆರೆಹಿಡಿದು ಮೀಸಲು ಅರಣ್ಯಕ್ಕೆ ಅಟ್ಟುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರನ್ನು ಸೇರಿಸಿ ಅರಣ್ಯ ಕಚೇರಿ ಎದುರು ಪ್ರತಿಭಟನೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಶೀಲಾ, ಕರಡ ಪಂಚಾಯಿತಿ ಸದಸ್ಯ ವಿಲಿನ್ ಬೇಪಾಡಿಯಂಡ ಮತ್ತು ಊರಿನ ಪ್ರಮುಖರು ಪಾಲ್ಗೊಂಡಿದ್ದರು.