ಕೂಡಿಗೆ, ಅ.೨೨: ಕೂಡಿಗೆ ಗ್ರಾಮ ಪಂಚಾಯಿತಿಯ ೨೦೨೦-೨೧ ಸಾಲಿನ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ವಾರ್ಡ್ ಸಭೆಯ ನಡಾವಳಿಯನ್ನು ಸಭೆಗೆ ಮಂಡಿಸಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು. ತಾಲೂಕು ಮಟ್ಟದ ಅಬಕಾರಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದರೆ, ಜಿಲ್ಲಾ ಮಟ್ಟದ ಅಧಿಕಾರಿಗೆ ಮನವಿಯನ್ನು ಸಲ್ಲಿಸಿ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಐ.ಎಸ್. ಗಣೇಶ್, ಕಾಂತರಾಜ್ ಮೊದಲಾದವರು ಸಭೆಯಲ್ಲಿ ತಿಳಿಸಿದರು. ಹಾಜರಿದ್ದ ಅಬಕಾರಿ ಅಧಿಕಾರಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಹಾರಂಗಿಯ ಅಚ್ಚುಕಟ್ಟು ಪ್ರದೇಶದ ಕಚೇರಿಗಳು ಹಾರಂಗಿಯಲ್ಲಿ ಇರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕೆಂದು ಗ್ರಾಮ ಸಭೆಯಲ್ಲಿ ನಿರ್ಣಯ ಮಾಡುವಂತೆ ಹುದುಗೂರು ಗ್ರಾಮಸ್ಥರಾದ ನಾಣಯ್ಯ, ಪ್ರಕಾಶ್, ಕುಮಾರ್, ರಾಜು, ಕಿರಣ, ಗಣೇಶ್ ಮೊದಲಾದವರು ಸಭೆಯಲ್ಲಿ ಒತ್ತಾಯ ಮಾಡಿದರು. ನಂತರ ನಿರ್ಣಯ ಪತ್ರವನ್ನು ಗ್ರಾಮ ಪಂಚಾಯಿತಿಯಿAದ ರಾಜ್ಯ ಮಟ್ಟದ ಕಾವೇರಿ ನೀರಾವರಿ ನಿಗಮಕ್ಕೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ಗ್ರಾಮಸ್ಥರು ತಿಳಿಸಿದರು. ಸಭೆಯ ಮಾಹಿತಿಯನ್ನು ಹಾರಂಗಿ ನೀರಾವರಿ ಇಲಾಖೆಯ ಅಭಿಯಂತರ ಗಮನಕ್ಕೆ ತರಲಾಗುವುದು ಎಂದು ಇಂಜಿನಿಯರ್ ಸಿದ್ದರಾಜ್ ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪ್ರಗತಿ ಕಾರ್ಯ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಂತೆ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಒತ್ತಾಯ ಮಾಡಿದರು.
ಗ್ರಾಮ ವ್ಯಾಪ್ತಿಯ ಉಪ ರಸ್ತೆ ಮತ್ತು ಅದಕ್ಕೆ ಹೊಂದಿಕೊAಡAತೆ ಇರುವ ಉಪ ಕಾಲುವೆಗಳ ಕಾಮಗಾರಿಗಳನ್ನು ಸಂಬAಧಿಸಿದ ಇಲಾಖೆಯವರು ತುರ್ತಾಗಿ ಮುಗಿಸುವಂತೆ ಚರ್ಚೆಗಳು ನಡೆದವು. ಅಹಾರ ಇಲಾಖೆಯ ವತಿಯಿಂದ ಸ್ಥಗಿತಗೊಂಡಿರುವ ಪಡಿತರ ಕಾರ್ಡ್ಗಳ ವ್ಯವಸ್ಥೆಯನ್ನು ಸರಿಪಡಿಸುವಂತೆ ಸ್ಥಳೀಯರಾದ ವೆಂಕಟೇಶ, ಕುಮಾರ್ ರಾಜಣ್ಣ, ಅಜಿತ್ ಸಭೆಯಲ್ಲಿ ಒತ್ತಾಯ ಮಾಡಿದರು.
ಮಣ್ಣು ಮಾರಾಟ ನಿಯಂತ್ರಣಕ್ಕೆ ಒತ್ತಾಯ
ಹಾರಂಗಿ ಮುಖ್ಯ ಕಾಲುವೆಯ ಎಡ ಮತ್ತು ಬಲ ಬದಿಗಳಲ್ಲಿ ಇರುವ ಮಣ್ಣನ್ನು ಅಕ್ರಮವಾಗಿ ತುಂಬಿಸಿ ಮಾರಾಟ ಮಾಡುತ್ತಿದ್ದರೂ ಕೂಡ ಅಂತಹವರ ವಿರುದ್ಧ ಏನು ಕ್ರಮ ಜರುಗಿಸಿದ್ದೀರಿ ಎಂದು ಸಭೆಯಲ್ಲಿ ನಿವಾಸಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮದಲಾಪುರದ ಬಿ.ಡಿ.ಅಣ್ಣಯ್ಯ, ಗಣೇಶ್, ಕಾಂತರಾಜು ಮೊದಲಾದವರು ಸಭೆಯಲ್ಲಿ ಪ್ರಸ್ತಾಪಿಸಿ ಹಾರಂಗಿ ಕಾಲುವೆ ನಿರ್ಮಾಣದ ಸಂದರ್ಭ ಜಾಗ ಕಳೆದುಕೊಂಡವರಿಗೆ ಪರಿಹಾರ ಒದಗಿಸಲಾಗಿದೆ. ಆದರೆ ಇಲಾಖೆಯ ಅಧೀನದಲ್ಲಿರುವ ಜಾಗದಲ್ಲಿ ಅತಿಕ್ರಮವಾಗಿ ಮಣ್ಣು ತುಂಬಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ವರದಿ ಬಂದಿದ್ದರೂ ಕೂಡ ನಿಗಮದ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಅಣ್ಣಯ್ಯ ಪ್ರಶ್ನಿಸಿದರು. ಮಣ್ಣು ಸಾಗಾಟದ ಸಂಬAಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದಾಗ್ಯೂ ಮತ್ತೆ ಮಣ್ಣು ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಅಭಿಯಂತರ ಸಿದ್ದರಾಜು ಎಚ್ಚರಿಸಿದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ಸೌಲಭ್ಯಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು.
ನೋಡಲ್ ಅಧಿಕಾರಿಯಾಗಿ ಕೂಡುಮಂಗಳೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರೇಮ ಕುಮಾರ್ ಆಗಮಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ ಅಭಿವೃದ್ಧಿ ಅಧಿಕಾರಿ ಅಯಿಷಾ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.