ಗೋಣಿಕೊಪ್ಪಲು, ಅ. ೨೨: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೊಡ್ಲೂರು ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ನೆಲೆಸಿರುವ ಬಡವರಿಗೆ ಕೂಡಲೇ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಗುರುಪ್ರಸಾದ್ ಕೆರೆಗೋಡು ಆಗ್ರಹಿಸಿದ್ದಾರೆ.

ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಹೈಸೊಡ್ಲೂರುವಿನ ಸರ್ವೆ ನಂ. ೧೮/೧ಪಿ.೧ ಸರ್ಕಾರಿ ಭೂಮಿಯಲ್ಲಿ ೮ ಎಕರೆ ಜಾಗವಿದ್ದು, ಈ ಸರ್ಕಾರಿ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಅನೇಕ ಹೋರಾಟಗಳನ್ನು ನಡೆಸಿ ಇಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವವರಿಗೆ ಮನೆ, ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯ ನೀಡುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಅನೇಕ ಹೋರಾಟಗಳು ನಡೆದರೂ ಜಿಲ್ಲಾಡಳಿತ ಮೌನವಹಿಸಿದೆ. ಈ ನಿಟ್ಟಿನಲ್ಲಿ ಅಂತಿಮವಾಗಿ ಜಿಲ್ಲಾಡಳಿತಕ್ಕೆ ಒಂದು ತಿಂಗಳ ಒಳಗೆ ಇಲ್ಲಿಯ ಸಮಸ್ಯೆಯನ್ನು ಬಗೆ ಹರಿಸದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟವನ್ನು ಕೈಗೆತ್ತಿಕೊಂಡು ಕೊಡಗು ಡಿಸಿ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಗುರುಪ್ರಸಾದ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಾಗದಲ್ಲಿ ೩೬ ಕುಟುಂಬಗಳು ಪ್ಲಾಸ್ಟಿಕ್ ಹೊದಿಕೆಯನ್ನು ನಿರ್ಮಿಸಿಕೊಂಡು ಮಕ್ಕಳಾದಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೂ ಜಿಲ್ಲಾಡಳಿತ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ ಎಂದು ದೂರಿದರು.

ಅಲ್ಲದೆ ಆರ್ಜಿ ಗ್ರಾಮದಲ್ಲಿ ವಾಸ ಮಾಡುತ್ತಿರುವ ೬೦ ಕುಟುಂಬಗಳಿಗೆ ಕೂಡ ಹಕ್ಕುಪತ್ರವನ್ನು ವಿತರಿಸಬೇಕು, ಗೋಮಾಳದ ಹೆಸರಿನಲ್ಲಿ ಇಲ್ಲಿರುವ ಜನರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಹಕ್ಕುಪತ್ರ ನೀಡಲು ಬಾಕಿ ಇರುವ ೫೨ ಕುಟುಂಬಗಳಿಗೆ ಕೂಡಲೇ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್, ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಮೈಸೂರು ಜಿಲ್ಲೆಯ ಸಂಚಾಲP ಆಲಗೋಡು ಶಿವಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕ ರಜನಿಕಾಂತ್ ಸೇರಿದಂತೆ ವಿದ್ಯಾರ್ಥಿ ಒಕ್ಕೂಟದ ಸತೀಶ್ ಉಪಸ್ಥಿತರಿದ್ದರು.