ಕಣಿವೆ, ಅ. ೨೨: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ಕೇರಳದ ಕೃಷಿಕರನ್ನು ಕೊಡಗು-ಕೇರಳ ಗಡಿಗಳಲ್ಲಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೇರಳದ ಶಾಸಕರ ನಿಯೋಗ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಕೇರಳದ ವಯನಾಡು ಜಿಲ್ಲೆಯ ಕಲ್ಪೆಟ್ಟ ಶಾಸಕ ಸಿದ್ದಿಕಿ, ರಾಷ್ಟಿçÃಯ ಕೃಷಿ ಉತ್ಪಾದಕರ ಸಂಘಟನೆಯ ಅಧ್ಯಕ್ಷ ಫಿಲಿಪ್, ಕಾರ್ಯದರ್ಶಿ ತನ್ವೀರ್ ರಜಾಕ್ ಮೊದಲಾದವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರನ್ನು ಖುದ್ದು ಭೇಟಿ ಮಾಡಿ, ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಕೇರಳ ಮೂಲದ ಶೇ. ೭೦ ರಷ್ಟು ಕೃಷಿಕರು ಕೃಷಿ ಚಟುವಟಿಕೆ ನಡೆಸುತ್ತಿದ್ದು ತಾವು ಉತ್ಪಾದಿಸುವ ಆಹಾರ ಧಾನ್ಯ ಹಾಗೂ ತೋಟಗಾರಿಕೆ ಬೆಳೆಗಳನ್ನು ದೇಶವ್ಯಾಪಿ ರಫ್ತು ಮಾಡುತ್ತಿದ್ದಾರೆ. ಅಲ್ಲದೇ ಕೃಷಿ ಮಾಡುವ ಪ್ರದೇಶಗಳಲ್ಲಿನ ಬಹಳಷ್ಟು ಮಂದಿಗೆ ವರ್ಷವಿಡೀ ಉದ್ಯೋಗ ನೀಡುತ್ತಿದ್ದೇವೆ. ಆದರೆ ಕೊರೊನಾ ಕಾರಣದಿಂದಾಗಿ ಕೇರಳದಿಂದ ಕರ್ನಾಟಕಕ್ಕೆ ಬಂದು ಹೋಗುವ ಕೃಷಿಕರಿಗೆ ಕೋವಿಡ್ ನಿಯಮಾವಳಿಗಳಿಂದ ಅನಗತ್ಯವಾದ ತೊಂದರೆಗಳಾಗುತ್ತಿದ್ದು ಕೃಷಿ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಆದ್ದರಿಂದ ಕೇರಳದ ಕೃಷಿಕರ ನೆರವಿಗೆ ಧಾವಿಸಬೇಕೆಂದು ಕೇರಳದ ಶಾಸಕರ ತಂಡ ಮನವಿ ಮಾಡಿದೆ. ಬಳಿಕ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಕಡ್ಡಾಯವಾಗಿ ಎರಡು ಲಸಿಕೆ ಪಡೆದವರು ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಅನುಮತಿ ಪಡೆದ ಕೇರಳದ ಕೃಷಿಕರಿಗೆ ಕರ್ನಾಟಕದ ಗಡಿಗಳಲ್ಲಿ ಅಂದರೆ ಕೊಡಗು ಜಿಲ್ಲೆಯ ಗಡಿಗಳಲ್ಲಿ ಅನಗತ್ಯ ತೊಂದರೆ ನೀಡದಂತೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ರಾಷ್ಟಿçÃಯ ಕೃಷಿಕರ ಆರ್ಗನೈಸೇಶನ್ ಅಧ್ಯಕ್ಷ ಫಿಲಿಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.