ಮಡಿಕೇರಿ, ಅ. ೨೧: ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳು ಪೂರ್ಣಗೊಳ್ಳುವ ಹಂತ ತಲುಪುತ್ತಿದ್ದರೂ ವಾತಾವರಣದಲ್ಲಿ ಅಸಹಜತೆಯ ಪರಿಣಾಮವಾಗಿ ಇನ್ನೂ ಮಳೆ ಬೀಳುತ್ತಿರುವುದರಿಂದ ಜನತೆ ಹೈರಾಣಾಗಿದ್ದಾರೆ. ಬಹುತೇಕ ವರ್ಷವಿಡೀ ಮಳೆಯ ವಾತಾವರಣದಲ್ಲೇ ದಿನ ಕಳೆಯುತ್ತಿರುವ ಜನರು ಈಗಿನ ಅಕಾಲಿಕ ಮಳೆಯಿಂದಾಗಿ ಮತ್ತಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಅದರಲ್ಲೂ ಕಾಫಿ ಬೆಳೆಗಾರರ ಪರಿಸ್ಥಿತಿ ದಿನೇ ದಿನೇ ಆತಂಕಕಾರಿಯಾಗುತ್ತಿದೆ.

ಈಗಾಗಲೇ ಹಣ್ಣಾಗುತ್ತಿರುವ ಅರೆಬಿಕ ಕಾಫಿಗೆ ಭಾರೀ ದುಷ್ಪರಿಣಾಮ ಎದುರಾಗುತ್ತಿದೆ. ಮಾತ್ರವಲ್ಲದೆ,

ಬೆಚ್ಚಿ ಬೀಳಿಸಿದ ಸಿಡಿಲು : ಭಾರೀ ಮಳೆ

(ಮೊದಲ ಪುಟದಿಂದ) ರೋಬಸ್ಟಾ ಬೆಳೆಗಾರರೂ ಮುಂದಿನ ಭವಿಷ್ಯದ ಲಗ್ಗೆ ಚಿಂತಿತರಾಗುತ್ತಿದ್ದಾರೆ. ವಿಶೇಷವೆಂದರೆ ಈ ಸಮಯದಲ್ಲಿ ಮಳೆ ಮಾತ್ರವಲ್ಲ, ಇದರೊಂದಿಗೆ ಗುಡುಗು - ಮಿಂಚಿನ ಅಬ್ಬರವೂ ಕಂಡುಬರುತ್ತಿರುವುದು. ತಾ. ೨೦ ರಂದು ಸಂಜೆ ತನಕ ಬಿಸಿಲಿನ ವಾತಾವರಣವಿತ್ತು. ಆದರೆ ರಾತ್ರಿ ೧೦ ಗಂಟೆಯ ಸುಮಾರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವೆಡೆಗಳಲ್ಲಿ ಗುಡುಗು ಮಿಂಚಿನ ಸಹಿತವಾಗಿ ಆರಂಭಗೊAಡ ಮಳೆ ಬೆಳಗಿನ ಜಾವದ ತನಕವೂ ಮುಂದುವರಿದಿತ್ತು. ತಾ. ೨೧ರ ಅಪರಾಹ್ನ ೪ ಗಂಟೆಯ ನಂತರ ಮತ್ತೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಮಳೆ ನಗರದಲ್ಲಿ ಸುರಿಯಿತು. ಸಿಡಿಲಿನ ರಭಸಕ್ಕೆ ಜನತೆ ಬೆಚ್ಚಿಬೀಳುವಂತಾಗಿತ್ತು. ಮಳೆಗಾಲದ ಸಂದರ್ಭವನ್ನು ಈ ಸನ್ನಿವೇಶ ನೆನಪಿಸುವಂತಾಗಿತ್ತು. ಇದೇ ರೀತಿಯ ಪರಿಸ್ಥಿತಿ ಇನ್ನೂ ಕೆಲದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.