ಮಡಿಕೇರಿ, ಅ. ೨೧: ಕಳೆದ ಸೆಪ್ಟೆಂಬರ್ ೧೮ ರಂದು ಜಿ.ಪಂ. ಇಂಜಿನಿಯರಿAಗ್ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೇರಿದಂತೆ ಐವರು ಎಸಿಬಿ ಬಲೆಗೆ ಬಿದ್ದಿದ್ದರು. ಯಾರೂ ನಿರೀಕ್ಷೆ ಮಾಡಿರದಿದ್ದ ಒಂದೇ ಬಾರಿಗೆ ಐವರ ಬಂಧನ, ಲಂಚ ಪ್ರಕರಣ, ಗುತ್ತಿಗೆದಾರ ರೊಬ್ಬರಿಂದ ದೂರಿನ ಅನ್ವಯ ಎಸಿಬಿ ಧಾಳಿ ಇನ್ನೂ ಮರೆಯದೇ ಇರುವ ಘಟನೆಯಾಗಿದೆ. ಆದರೆ, ಕೆಲವೊಂದು ಬದಲಿ ವ್ಯವಸ್ಥೆ ಮಾಡಿದರೂ, ತಾಂತ್ರಿಕ ಕಾರಣಗಳು, ಸಿಬ್ಬಂದಿ ಕೊರತೆ ಹಾಗೂ ಅಧಿಕಾರ ಹಸ್ತಾಂತರಿಸದೆ ತಲೆದೋರಿರುವ ಸಮಸ್ಯೆಗಳಿಂದಾಗಿ ಇಂಜಿನಿಯರ್ ವಿಭಾಗದಲ್ಲಿ ನೂರಾರು ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿರುವುದು ‘ಶಕ್ತಿ’ಯ ಗಮನಕ್ಕೆ ಬಂದಿದೆ.

ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀ ಕಂಠಯ್ಯ, ಜೆಇ ತೌಸಿಫ್, ಕಂಪ್ಯೂಟರ್ ಆಪರೇಟರ್ ಕವನ್, ದ್ವಿತೀಯ ದರ್ಜೆ ಗುಮಾಸ್ತ ರಮೇಶ್ ಮತ್ತು ಏಜೆಂಟ್ ಸಂತೋಷ್ ಇವರುಗಳು ಎಸಿಬಿ ಧಾಳಿಯಲ್ಲಿ ಬಂಧಿತರಾಗಿದ್ದರು. ಬಳಿಕ ಇವರನ್ನು ಅಮಾನತ್ತುಗೊಳಿಸಲಾಗಿತ್ತು. ಈ ನಡುವೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು, ಪೊನ್ನಂಪೇಟೆ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹದೇವ್ ಅವರನ್ನು ಹಂಗಾಮಿ ಯಾಗಿ ಜಿ.ಪಂ. ಇಇ ಆಗಿ ನೇಮಿಸಿ ದ್ದಾರೆ. ಅವರು ನಿತ್ಯ ಕೆಲವು ತಾಸುಗಳವರೆಗೆ ಮಡಿಕೇರಿಯ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಅಶೋಕ್ ಅವರನ್ನು ಜೆಇ ಸ್ಥಾನಕ್ಕೆ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಮತ್ತೊಬ್ಬರು ಪ್ರೇಮ್‌ಕುಮಾರ್ ಎಂಬವರನ್ನು ನಿಯೋಜಿಸಲು ತಯಾರಿ ನಡೆದಿದೆ. ಮತ್ತೊಬ್ಬ ಸಿಬ್ಬಂದಿ ರಮೇಶ್ ಕೂಡ ಇನ್ನೂ ಅಧಿಕಾರ ಹಸ್ತಾಂತರಿಸಿಲ್ಲ.

ಆದರೆ, ಜೆಇ ತೌಸಿಫ್ ಅವರಿಂದ ಇನ್ನೂ ಅಧಿಕಾರ ಹಸ್ತಾಂತರವಾಗದ ಹಿನ್ನೆಲೆಯಲ್ಲಿ ಸುಮಾರ್ ೪೦೦ ಕಡತ ಗಳು ಕಚೇರಿಯಲ್ಲಿ ವಿಲೇವಾರಿ ಯಾಗದೇ ಸ್ಥಗಿತಗೊಂಡಿವೆ. ಮುಖ್ಯವಾಗಿ ಸಂಸದರ ನಿಧಿ, ಶಾಸಕರ ನಿಧಿ, ರಸ್ತೆ ಕಾಮಗಾರಿ ಮೊದಲಾದ ಪ್ರಮುಖ ಅಭಿವೃದ್ಧಿ ಕೆಲಸಗಳ ಕಡತ ಬಾಕಿಯಾಗಿ ಉಳಿದಿದೆ. ‘ಶಕ್ತಿ’ಗೆ ಅಧಿಕೃತವಾಗಿ ತಿಳಿದು ಬಂದ ಅನ್ವಯ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾದ ಹಳೆಯ ಇನ್ನೂ ಅನೇಕ ಕಡತಗಳು ವಿಲೇವಾರಿಯಾಗದೇ ಉಳಿದಿದೆ. ಇದಕ್ಕೆ ಮುಖ್ಯ ಕಾರಣವಿದೆ; ಈ ಎಲ್ಲಾ ಕಡತಗಳ ಮಾಹಿತಿಗಳು ಅದಕ್ಕೆ

(ಮೊದಲ ಪುಟದಿಂದ) ಸಂಬAಧಿಸಿದ ಹಂತ ಹಂತದ ವಿವರಗಳು ಡಿಜಿಟಲ್ ಯಂತ್ರದಲ್ಲಿ ಅಡಕವಾಗಿದೆ. ಡಿಜಿಟಲ್ ವಿದ್ಯುನ್ಮಾನ ಯಂತ್ರವನ್ನು ತೆರಯಬೇಕಾದರೆ, ಅದಕ್ಕೆ ಕಾನೂನಾತ್ಮಕ ಪ್ರಕ್ರಿಯೆಗಳಿವೆ.

ಒಂದೆಡೆ ಈ ಹಿಂದೆ ಇಇ ಆಗಿದ್ದ ಶ್ರೀಕಂಠಯ್ಯ ಅವರ ಬಳಿ ಇದಕ್ಕೆ ಸಂಬAಧಿಸಿದ ಇ-ಪ್ರೊಕ್ಯೂರ್ ಕೀಗಳಿದ್ದು, ಟೆಂಡರ್ ಮತ್ತಿತರರ ಅಭಿವೃದ್ಧಿ ಕಾರ್ಯಗಳಿಗೆ ಸಂಬAಧಿಸಿದ ಮಾಹಿತಿ ಅಡಕವಾಗಿದೆ. ಇದೀಗ ಅವರು ಸೇವೆಯಲ್ಲಿ ಇಲ್ಲದಿರುವುದರಿಂದ ಹೊಸದಾಗಿ ಡಿಜಿಟಲ್ ಕೀಯನ್ನು ಸಿದ್ಧಗೊಳಿಸ ಬೇಕಿದೆ. ಅದಕ್ಕೆ ನೂತನ ಅಧಿಕಾರಿಗೆ ಅಧಿಕಾರ ನೀಡಬೇಕಾಗಿದೆ. ಈ ಪ್ರಕ್ರಿಯೆಗಳು ಇಲ್ಲಿ ನಡೆದು ಅಂತಿಮವಾಗಿ, ಅಧಿಕೃತವಾಗಿ ಬೆಂಗಳೂರು ಮಟ್ಟದಲ್ಲಿ ಸಮ್ಮತಿ ಪಡೆಯಬೇಕಿದೆ. ಅದೇ ರೀತಿ ಜೆಇ ತೌಸಿಫ್ ಬಳಿ ಇದ್ದ, ಡಿಜಿಟಲ್ ಕೀ ತಾಂತ್ರಿಕತೆಯನ್ನು ಇದೀಗ ಹೊಸ ಅಧಿಕಾರ ಬಹುಪಾಲು ಪ್ರೇಮ್‌ಕುಮಾರ್ ಅವರಿಗೆ ನೀಡಬೇಕಿದೆ. ಇದಕ್ಕೂ ಕೂಡ ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಬೇಕಿದೆ.

ಈ ನಡುವೆ ಜಿಲ್ಲಾ ಖಜಾನೆಯಿಂದ ಇಂಜಿನಿಯರ್ ವಿಭಾಗದ ಸಿಬ್ಬಂದಿಗಳಿಗೆ ವೇತನ ನೀಡಲು ಹಣ ಡ್ರಾ ಮಾಡಬೇಕಾದರೆ, ಕೆ-೨ ಆಡಳಿತಾತ್ಮಕ ಕೀ ನಿರ್ವಹಣೆಯ ಅಗತ್ಯವಿದೆ. ಇದನ್ನು ಕೂಡ ಪ್ರಬಾರ ಇಂಜಿನಿಯರ್ ಅವರಿಗೆ ಅಧಿಕಾರ ಒದಗಿಸಲು ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾಗಿದೆ. ಇದರಿಂದಾಗಿ ಜಿ.ಪಂ. ಯ ಜಿಲ್ಲಾಮಟ್ಟದ ಸಿಬ್ಬಂದಿ ಹಾಗೂ ಉಪವಿಭಾಗ ಮಟ್ಟದ ಸಿಬ್ಬಂದಿಗಳಿಗೆ ಕಳೆದ ತಿಂಗಳ ವೇತನವನ್ನು ನೀಡಲು ಇನ್ನೂ ಸಾಧ್ಯವಾಗಿಲ್ಲ. ಈ ನಡುವೆ ಎರಡು ವಿಭಾಗಗಳಲ್ಲಿಯೂ ಭಾರೀ ಸಿಬ್ಬಂದಿ ಕೊರತೆ ಇದೆ. ಸುಮಾರು ೨೫ ಸಿಬ್ಬಂದಿಗಳ ನೇಮಕಾತಿ ಆದರೆ ಮಾತ್ರ ಈ ವಿಭಾಗದ ಕೆಲಸಗಳು ಸುಸೂತ್ರವಾಗಿ ನಡೆಯಲು ಸಾಧ್ಯ ಎಂಬ ಮಾಹಿತಿ ದೊರೆತಿದೆ.

ಈ ನಡುವೆ ಅಕ್ಟೋಬರ್ ತಿಂಗಳಿನಲ್ಲಿ ಅನೇಕ ಸರಕಾರಿ ರಜೆಗಳು ಬಂದುದರಿAದ ತಾಂತ್ರಿಕ ವ್ಯವಸ್ಥೆಗಳನ್ನು ಸರಿಪಡಿಸಲು ಇನ್ನೂ ಹೆಚ್ಚು ವಿಳಂಬವಾಗಿದೆ. ಆದರೆ ಈಗ ಇರುವ ಅಧಿಕಾರಿಗಳು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ; ಆದಷ್ಟು ಶೀಘ್ರ ಈ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಆರೋಪಕ್ಕೊಳಗಾದ ಮಂದಿ ಕಚೇರಿಗೆ ಬಂದು, ಅಧಿಕಾರ ಹಸ್ತಾಂತರಿಸಲು ಸೂಚಿಸಲಾಗಿದೆ. ಅವರು ಹಸ್ತಾಂತರಿಸದಿದ್ದರೆ, ಕಾನೂನಿನನ್ವಯ ನಾವೇ ಹೊಸ ನೇಮಕಾತಿ ಮಾಡಿ ಪ್ರಬಾರವಾಗಿ ಅವರಿಗೆ ಅಧಿಕಾರ ನೀಡಲು ಅವಕಾಶವಿದೆ ಎಂದು ಸಂಬAಧಿತ ಅಧಿಕಾರಿಗಳು ವಿವರಿಸಿದ್ದಾರೆ.