ಸುಂಟಿಕೊಪ್ಪ, ಅ. ೨೧: ಹೌದು., ಈ ರೀತಿಯ ವಿಸ್ಮಯದ ಘಟನೆ ನಡೆದಿರುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಶಕ್ತಿಶಾಲಿ ದೈವವೆಂದೇ ನಂಬಲಾಗಿರುವ ಸ್ವಾಮಿ ಕೊರಗಜ್ಜನಿಗೆ ಹರಕೆಯಾಗಿ ಒಪ್ಪಿಸಿದ್ದ ಅಮೃತ (ಮದ್ಯ)ವನ್ನು ಕದ್ದು ಕುಡಿದ ಕಾರಣಕ್ಕಾಗಿ ವ್ಯಕ್ತಿಯೋರ್ವನಿಗೆ ತೊಂದರೆ ಕಾಣಿಸಿಕೊಂಡು ಮಾಡಿದ ತಪ್ಪನ್ನು ಒಪ್ಪಿಕೊಂಡ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿರುವ ಘಟನೆ ನಡೆದಿರುವದಾಗಿ ಜನವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಲನೆಲೆಯನ್ನು ಹೊಂದಿರುವ ಕೊರಗ ತನಿಯ ಕೊರಗಜ್ಜ ದೈವದ ಆರಾಧನೆಗಳು ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿಯೂ ಕಂಡುಬರುತ್ತಿದೆ. ಅಂತೆಯೇ ಸುಂಟಿಕೊಪ್ಪ ಸನಿಹದ ಕೆದಕಲ್‌ನಲ್ಲಿ ಕೊರಗಜ್ಜನ ನೆಲೆಯಲ್ಲಿ ವಾರದಲ್ಲಿ ಮೂರು ದಿವಸ ದೈವ ದರ್ಶನ ನಡೆಯುತ್ತದೆ. ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ, ಹರಕೆ ಸಲ್ಲಿಸುತ್ತಾರೆ. ಇತ್ತೀಚೆಗೆ ದರ್ಶನ ಬಂದಾಗ ಕೊರಗಜ್ಜ ದೇವರು ತನಗೆ ಭಕ್ತರೋರ್ವರು ಹರಕೆಯ ರೂಪದಲ್ಲಿ ಸಮರ್ಪಿಸಿದ್ದ ಅಮೃತ (ಮದ್ಯ)ವನ್ನು ಯಾರೋ ಕದ್ದಿರುವದಾಗಿ ನುಡಿಯಾಡಿದ್ದರು.

(ಮೊದಲ ಪುಟದಿಂದ) ಇದರಿಂದ ವಿಚಲಿತರಾದ ದೇವಾಲಯ ಸಮಿತಿಯವರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ರಾತ್ರಿ ವೇಳೆಯಲ್ಲಿ ವ್ಯಕ್ತಿಯೋರ್ವ ಮಾಸ್ಕ್ ಧರಿಸಿಕೊಂಡು ಬಂದು ದೇವರಿಗೆ ಕೈಮುಗಿದು ಎರಡು ಪ್ಯಾಕೆಟ್ ಮದ್ಯವನ್ನು ಎತ್ತಿಕೊಂಡು ಹೋಗುತ್ತಿರುವದು ಗೋಚರಿಸಿದೆ. ರಾತ್ರಿ ಹಾಗೂ ಮಾಸ್ಕ್ ಹಾಕಿದ್ದರಿಂದ ಯಾರೆಂದು ಗೊತ್ತಾಗಲಿಲ್ಲ.

ಈ ಬಗ್ಗೆ ದೇವಾಲಯದ ಪೂಜಾರಿ ಹರಕೆ ಕಟ್ಟಿದ ನಂತರದಲ್ಲಿ ಗ್ರಾಮದ, ಮದ್ಯವ್ಯಸನಿಯಾಗಿರುವ ವ್ಯಕ್ತಿಯೋರ್ವನ ಕಣ್ಣಿನ ಸುತ್ತಲೂ ಕಪ್ಪು ಬಣ್ಣದೊಂದಿಗೆ ಕಣ್ಣುಗಳೆರಡು ಮುಚ್ಚಿಕೊಂಡಿರುವದು ಗೋಚರಿಸಿದೆ. ಪರಿಸ್ಥಿತಿಯ ಅರಿವಾಗಿ ಆ ವ್ಯಕ್ತಿ ದೇವಾಲಯಕ್ಕೆ ಬಂದು ಮದ್ಯ ಸೇವಿಸಲು ಹಣ ಸಿಗದ್ದರಿಂದ ತಾನೇ ಮದ್ಯ ತೆಗೆದಿರುವದಾಗಿ ತಪ್ಪೊಪ್ಪಿಕೊಂಡು ತಪ್ಪು ಕಾಣಿಕೆ ಸಲ್ಲಿಸುವದಾಗಿ ಹೇಳಿದ ನಂತರ ಇದೀಗ ಆತನ ಕಣ್ಣು ಸ್ವಲ್ಪ ಸ್ವಲ್ಪವಾಗಿ ತೆರೆದುಕೊಳ್ಳುತ್ತಿದೆ.

ಈ ಹಿಂದೆ ಕೂಡ ಕೊರಗಜ್ಜನ ಮೂಲ ನೆಲೆ ಮಂಗಳೂರು ಬಳಿಯ ಕುತ್ತಾರಿನಲ್ಲಿ ಭಂಡಾರ ಡಬ್ಬಿಗೆ ಬೇಡದ ವಸ್ತುಗಳನ್ನು ಹಾಕಿದ್ದ ಯುವಕರ ಪೈಕಿ ಓರ್ವ ಅಸುನೀಗಿ ಇನ್ನಿತರರು ತಪ್ಪೊಪ್ಪಿಗೆ ಹರಕೆ ಸಲ್ಲಿಸಿದ ಘಟನೆ ಹಾಗೂ ಅರಂತೋಡಿನಲ್ಲಿ ಕೊರಗಜ್ಜನ ೧೨ ಕೋಲ ನಡೆಯುತ್ತಿದ್ದಾಗ ಮತ್ತೊಂದು ಕೋಲ ಗೋಚರವಾಗಿ ಅಚ್ಚರಿ ಮೂಡಿಸಿದ್ದ ಬೆನ್ನಲ್ಲೇ ಜಿಲ್ಲೆಯಲ್ಲಿಯೂ ಇಂತಹ ಒಂದು ಘಟನೆ ನಡೆದಿರುವದು ಆಸ್ತಿಕರಲ್ಲಿ ಭಕ್ತಿಭಾವ ಹಚ್ಚಿಸಿದೆ. -ರಾಜು ರೈ