ಕಣಿವೆ, ಅ. ೧೯ : ಕುಶಾಲನಗರದ ರಥಬೀದಿಯ ಮುಖ್ಯ ರಸ್ತೆಯಲ್ಲಿರುವ ಎರಡು ದೇವಾಲಯಗಳಲ್ಲಿ ಸರಣಿ ಕಳ್ಳತನ ನಡೆದಿರುವ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ರಥಬೀದಿಯ ಆಂಜನೇಯ ಸ್ವಾಮಿ ದೇವಾಲಯ ಹಾಗೂ ಚೌಡೇಶ್ವರಿ ದೇವಾಲಯಗಳ ಒಳ ನುಗ್ಗಿದ ದುಷ್ಕರ್ಮಿಗಳು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿನ ಲಕ್ಷಾಂತರ ರೂಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸೋಮವಾರ ನಡುರಾತ್ರಿ ೧೨.೫೬ ರ ಸಮಯದಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮೊದಲು ಆಂಜನೇಯ ಸ್ವಾಮಿ ದೇವಾಲಯದ ಮುಂಬದಿಯ ಕಿಟಕಿಯ ಸರಳುಗಳನ್ನು ಕಬ್ಬಿಣದ ಬ್ಲೇಡಿನಿಂದ ತುಂಡರಿಸಿ ಒಳನುಗ್ಗಿದ್ದಾರೆ. ಖದೀಮರು ಮೊದಲು ದೇವಾಲಯದೊಳಗಿನ ಸಿಸಿ ಕ್ಯಾಮೆರಾದ ವಯರ್ ಅನ್ನು ತುಂಡರಿಸಿದ್ದಾರೆ. ನಂತರ ದೇವಾಲಯದೊಳಗಿನ ಕಾಣಿಕೆ ಹುಂಡಿಗೆ ಅಳವಡಿಸಿದ್ದ ದೊಡ್ಡ ಗಾತ್ರದ ಬೀಗವನ್ನು ಒಡೆದು ಅದರೊಳಗೆ ಭಕ್ತರು ಹಾಕಿದ್ದರು ಎನ್ನಲಾದ ಲಕ್ಷಾಂತರ ರೂಗಳನ್ನು ದೋಚಿ ದೇವಾಲಯದ ಒಳಭಾಗದ ಪೂರ್ವ ದಿಕ್ಕಿನ ಬಾಗಿಲಿನಿಂದ ರಾತ್ರಿ ೧.೪೩ ಗಂಟೆಗೆ

(ಮೊದಲ ಪುಟದಿಂದ) ಹೊರತೆರಳಿದ ಚಿತ್ರಣ ಎದುರಿನ ಬಟ್ಟೆ ಅಂಗಡಿಯೊAದರಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಳಿಕ ಅಲ್ಲಿಯೇ ಇದ್ದ ಚೌಡೇಶ್ವರಿ ದೇಗುಲದೊಳಕ್ಕೂ ನುಗ್ಗಿದ ಆಗಂತುಕರು ಅಲ್ಲಿನ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿನ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ.

ಈ ಮಧ್ಯೆ ಈ ಆಗಂತುಕರು ಆಂಜನೇಯ ದೇವಾಲಯದೊಳಕ್ಕೆ ೧೨-೫೬ಕ್ಕೆ ನುಗ್ಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭವೇ ರಾತ್ರಿ ೧.೩೯ ಕ್ಕೆ ಮಾರುಕಟ್ಟೆ ರಸ್ತೆಯ ಕಡೆಯಿಂದ ಪೊಲೀಸ್ ಇಲಾಖೆಯ ಹೈವೇ ಪಟ್ರೋಲ್ ವಾಹನ ಆಂಜನೇಯ ದೇವಾಲಯದ ಎದುರಿನಲ್ಲೇ ತೆರಳಿದ್ದೂ ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಆಗಂತುಕರು ದೇವಾಲಯದೊಳಗೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಎರಡು ಬೈಕ್‌ಗಳು ಅತ್ತಿಂದತ್ತ - ಇತ್ತಿಂದತ್ತ ಚಲಿಸುವ ಮೂಲಕ ದೇಗುಲದೊಳಗಿದ್ದಂತಹ ಸಹಚರರಿಗೆ ಮಾಹಿತಿ ರವಾನಿಸುವ ಅವಲೋಕನ ನಡೆಸುತ್ತಿದ್ದ ಬಗ್ಗೆಯೂ ಕ್ಯಾಮೆರಾದಲ್ಲಿ ದಾಖಲಾಗಿದೆ.

ಮಂಗಳವಾರ ಬೆಳಿಗ್ಗೆ ದೇವಾಲಯದ ಪ್ರಧಾನ ಅರ್ಚಕ ರಾಧಾಕೃಷ್ಣ ಎಂಬವರು ಎಂದಿನAತೆ ದೇವಾಲಯದ ಬಾಗಿಲು ತೆರೆಯಲು ಯತ್ನಿಸಿದ ಸಂದರ್ಭ ದುಷ್ಕರ್ಮಿಗಳ ದುಷ್ಕೃತ್ಯ ಕಂಡೊಡನೆ ಭಯಭೀತರಾಗಿ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಕುಶಾಲನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ನಂತರ ಮಡಿಕೇರಿಯಿಂದ ಶ್ವಾನದಳ ಹಾಗೂ ಬೆರಳಚ್ಚು ಪರಿಣಿತರ ತಂಡ ಆಗಮಿಸಿ ತಪಾಸಣೆ ನಡೆಸಿತು. ಈ ಎರಡೂ ದೇವಾಲಯಗಳ ಹಿಂದೆ ಮುಂದೆ ಹಾಗೂ ಸುತ್ತಲೂ ವಾಸದ ಮನೆಗಳು ಇದ್ದರೂ ಕೂಡ ಜೊತೆಗೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಇದ್ದಾಗ್ಯೂ ಕೂಡ ದೇವಾಲಯದ ಕಿಟಕಿಯ ಕಬ್ಬಿಣದ ಸರಳು ಕತ್ತರಿಸಿ ದೇವಾಲಯದೊಳಗೆ ನುಗ್ಗಿ ಹಣ ದೋಚಿರುವ ಕಳ್ಳರ ಕರಾಮತ್ತು ಕಂಡು ಭಕ್ತ ಜನ ಹೌಹಾರಿದ್ದಾರೆ.

ಕೂಡಲೇ ಕುಶಾಲನಗರದ ಇತರ ಎಲ್ಲಾ ದೇವಾಲಯಗಳಿಗೂ ರಾತ್ರಿ ಸಮಯ ಸೂಕ್ತ ಬಂದೋ ಬಸ್ತ್ ಹಾಕಬೇಕು. ಈಗಾಗಲೇ ಜರುಗಿರುವ ಕಳ್ಳತನ ಪ್ರಕರಣಗಳನ್ನು ಬೇಧಿಸಬೇಕು ಎಂದು ಚೌಡೇಶ್ವರಿ ದೇಗುಲದ ಕಾರ್ಯದರ್ಶಿ ಡಿ.ವಿ.ರಾಜೇಶ್ ಹಾಗೂ ಆಂಜನೇಯ ದೇಗುಲದ ಅರ್ಚಕ ರಾಧಾಕೃಷ್ಣ ಒತ್ತಾಯಿಸಿದ್ದಾರೆ. ಕಳ್ಳತನ ನಡೆಸಿರುವ ಈ ಎರಡೂ ದೇವಾಲಯಗಳ ಬಳಿಯೇ ಬಸವೇಶ್ವರ ದೇವಾಲಯವಿದ್ದು ಅಲ್ಲಿ ಹುಂಡಿ ಇರಲಿಲ್ಲ. ಹಾಗಾಗಿ ಈ ಕೃತ್ಯ ಪೂರ್ವನಿಯೋಜಿತವೇ ಎಂಬದು ಕೆಲವು ಭಕ್ತರ ಸಂದೇಹವಾಗಿದೆ. ಒಟ್ಟಾರೆ ಪೊಲೀಸರ ಕಾರ್ಯಾಚರಣೆಯ ನಂತರವಷ್ಟೇ ಸತ್ಯಾಂಶ ಹೊರಬರಬೇಕಿದೆ. - ಕೆ.ಎಸ್. ಮೂರ್ತಿ