ನೂತನ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ

ಮಡಿಕೇರಿ, ಅ. ೧೯: ಕೊಡಗಿನ ಜನರ ಆಶೋತ್ತರಗಳಿಗೆ ಸ್ಪಂದಿಸಲು ಮೊದಲ ಆದ್ಯತೆ ನೀಡುವುದಾಗಿ ನೂತನ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಹೇಳಿದರು.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಮೈಸೂರಿನ ವಲಯ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಕಾರ್ಯನಿಮಿತ್ತ ಕೊಡಗಿಗೆ ಹಲವು ಬಾರಿ ಭೇಟಿ ನೀಡಿದ್ದೇನೆ ಮಾತ್ರವಲ್ಲದೆ ಪ್ರವಾಸಿಗನಾಗಿಯೂ ಕೊಡಗು ಜಿಲ್ಲೆಗೆ ನಾಲ್ಕೆöÊದು ಬಾರಿ ಬಂದಿದ್ದೇನೆ. ಹೀಗಾಗಿ ಕೊಡಗಿನ ಬಗ್ಗೆ ಅರಿವಿದೆ. ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಇಲ್ಲಿಯೂ ವಿಭಿನ್ನ ಸಮಸ್ಯೆಗಳಿವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪರಿಹಾರ ಕ್ರಮ ಕಂಡು ಹಿಡಿಯುವ ನಿಟ್ಟಿನಲ್ಲಿ ಎಲ್ಲಾ ಇಲಾಖಾಧಿಕಾರಿಗಳ ಸಭೆಯನ್ನು ಕರೆದು ಕಾರ್ಯಪ್ರವೃತ್ತರಾಗುವುದಾಗಿ ಸತೀಶ ಅವರು ಹೇಳಿದರು.

ಕೊಡಗಿನ ಜನ ವಿದ್ಯಾವಂತರಾಗಿದ್ದು, ಇಲ್ಲಿನ ಜನಪ್ರತಿನಿಧಿಗಳು ಕೂಡ ಅನುಭವಿಗಳಾಗಿದ್ದಾರೆ. ಜಿಲ್ಲಾಧಿಕಾರಿಯಾಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದು ತನ್ನ ಕರ್ತವ್ಯ. ಈ ಹಿನ್ನೆಲೆಯಲ್ಲಿ ಜನರ ಅಹವಾಲು ಸ್ವೀಕರಿಸಿ; ಕಾನೂನು ನಿಯಮ ಪಾಲನೆಯೊಂದಿಗೆ ಅವುಗಳ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಶ್ರಮಿಸುತ್ತೇನೆ. ಕೊಡಗಿನಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಈ ಹಿಂದೆ ಇದ್ದಂತಹ ಸಂದರ್ಶನದ ದಿನ ಹಾಗೂ ಸಮಯವನ್ನೇ ತನ್ನ ಅವಧಿಯಲ್ಲೂ ಮುಂದುವರಿಸುತ್ತೇನೆ. ಜನತೆ ಯಾವುದೇ ರೀತಿಯಲ್ಲೂ ಅಂಜಿಕೆಗೊಳಗಾಗದೆ ತನ್ನನ್ನು ಮುಕ್ತವಾಗಿ ಭೇಟಿ ಮಾಡಬಹುದು ಎಂದು ಶಿವಮೊಗ್ಗ ಜಿಲ್ಲೆಯವರಾದ ಡಾ. ಬಿ.ಸಿ. ಸತೀಶ ಅವರು ಹೇಳಿದರು. -ಉಜ್ವಲ್ ರಂಜಿತ್