ಶನಿವಾರಸಂತೆ, ಅ. ೧೯: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. ಪಂಚಾಯಿತಿ ತಾತ್ಕಾಲಿಕ ನೀರುಗಂಟಿ ಎಂ.ಎನ್. ಮಂಜುನಾಥ ಅವರು ತಾ. ೧೭ ರಿಂದ ಕರ್ತವ್ಯಕ್ಕೆ ಅನಧಿಕೃತ ಗೈರಾಗಿರುವುದು, ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಿಯಾಗಿ ಬಿಡದೆ ಇರುವುದು ಹಾಗೂ ಧರ್ಮಪ್ರಚಾರ ಮಾಡಿರುವುದು ಪೊಲೀಸ್ ಇಲಾಖೆಯಿಂದ ತಿಳಿದು ಬಂದಿದ್ದು, ಗ್ರಾಮ ಪಂಚಾಯಿತಿಯ ತಾತ್ಕಾಲಿಕ ನೌಕರನಾಗಿ ಧರ್ಮ ಪ್ರಚಾರ ಮಾಡುವುದು ಮತ್ತು ಕರ್ತವ್ಯಕ್ಕೆ ಅನಧಿಕೃತ ಗೈರಾಗಿರುವ ಬಗ್ಗೆ ಮಂಜುನಾಥ್‌ಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ತೀರ್ಮಾನಿಸಲಾಯಿತು.

ತುರ್ತು ಸಭೆಯಲ್ಲಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಗೀತಾ ಹರೀಶ್, ಫರ್ಜಾನ ಶಾಹಿದ್, ಸರಸ್ವತಿ, ಕಾವೇರಿ, ಎಸ್.ಎನ್. ರಘು, ಎಸ್.ಸಿ. ಶರತ್‌ಶೇಖರ್, ಸರ್ದಾರ್, ಆದಿತ್ಯಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯಾಚಾರ್ ಹಾಜರಿದ್ದರು.