ಮಡಿಕೇರಿ, ಅ. ೧೯: ಸರಕಾರಿ ಅನುದಾನಿತ ಹಾಗೂ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳು ಹಾಗೂ ಅವರ ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಇತ್ಯಾದಿ ಹಂಚುವ ಅದ್ಧೂರಿ ಕಾರ್ಯಕ್ರಮಗಳನ್ನು ನಿಷೇಧಿಸಿ ರಾಜ್ಯ ಸರಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಆದೇಶಿಸಿದೆ.
ಈ ಸಂಸ್ಥೆಗಳಲ್ಲಿ ದಾಖಲಾಗಿರುವ ಮಕ್ಕಳು ಕುಟುಂಬದಲ್ಲಿ ಬೆಳೆಯುವ ಬೇರೆ ಯಾವುದೇ ಮಗುವಿಗಿಂತ ಕಡಿಮೆ ಇಲ್ಲ ಎಂಬ ಭಾವನೆಯನ್ನು ಕಾಪಾಡುವ ಸಲುವಾಗಿ ಸಂಸ್ಥೆಯಲ್ಲಿರುವ ಮಕ್ಕಳ ಹುಟ್ಟುಹಬ್ಬ ಹಾಗೂ ಸರಕಾರದ ಆದೇಶದ ಮೂಲಕ ನಿಗದಿಪಡಿಸಿದ ವ್ಯಕ್ತಿಗಳ ಹುಟ್ಟುಹಬ್ಬ ಆಚರಣೆಯನ್ನು ಹೊರತುಪಡಿಸಿ, ಬೇರೆ ಯಾರ ಹುಟ್ಟುಹಬ್ಬ ಆಚರಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.
ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲಾಗಿರುವ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಮಕ್ಕಳು, ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟವರು, ತಾಯಿ ಅಥವಾ ತಂದೆ ಇಲ್ಲದ, ಅತ್ಯಾಚಾರಕ್ಕೆ ಒಳಗಾದ, ತಂದೆ-ತಾಯAದಿರಿAದ ತಿರಸ್ಕರಿಸಲ್ಪಟ್ಟ, ಭಿಕ್ಷಾಟಣೆಯಿಂದ ರಕ್ಷಿಸಲ್ಪಟ್ಟ ಇತ್ಯಾದಿ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವವರಾಗಿರುತ್ತಾರೆ. ಇಂತಹ ಮಕ್ಕಳ ಮನಸ್ಸಿಗೆ ಖುಷಿ ತರುವಂತಹ ಸೃಜನಶೀಲತೆಯ ಕಾರ್ಯಕ್ರಮವನ್ನು ಏರ್ಪಡಿಸಿ ಮಕ್ಕಳ ಮನಸ್ಸು ಸದೃಢ ಹಾಗೂ ಆಹ್ಲಾದಕರವಾಗುವಂತೆ ಪ್ರೋತ್ಸಾಹಿಸಬೇಕಾಗುತ್ತದೆ.
ಆದರೆ, ಗಣ್ಯ ವ್ಯಕ್ತಿಗಳು ಇಲ್ಲಿ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿದರೆ, ಸಂಸ್ಥೆಯ ಮಕ್ಕಳಿಗೆ ಅವರ ಹುಟ್ಟುಹಬ್ಬ ಇದೇ ರೀತಿಯಲ್ಲಿ ಆಚರಿಸಲು ಸಾಧ್ಯವಾಗದೆ, ಗಣ್ಯರ ಹುಟ್ಟುಹಬ್ಬ ಆಚರಣೆಯೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಟರಿಣಾಮ ಬೀರಿ, ಮನಸ್ಸಿಗೆ ಆಘಾತವಾಗಿ ಮನಸ್ಸು ದುರ್ಬಲವಾಗುವ ಸಂಭವ ಹೆಚ್ಚಿದೆ. ಇಂತಹ ಆಚರಣೆಗಳು ಮಕ್ಕಳ ಆತ್ಮಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ತಿಳಿಸಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಇಂತಹ ಆಚರಣೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.