ಗೋಣಿಕೊಪ್ಪಲು, ಅ. ೧೯: ರೈತರು ತಮ್ಮ ಭತ್ತದ ಗದ್ದೆಗಳಲ್ಲಿ ಕೃಷಿ ಮಾಡಿ ಇನ್ನೇನೂ ಫಸಲು ಕೈ ಸೇರಬೇಕು ಅನ್ನುವಷ್ಟರಲ್ಲಿ ಕಾಡಾನೆಗಳ ಉಪಟಳದಿಂದ ಭತ್ತದ ಗದ್ದೆ ಧ್ವಂಸಗೊAಡಿದೆ. ಅಲ್ಲದೇ ರೈತರು ನೀರಾವರಿಗೆ ಬಳಸುವ ಪೈಪ್‌ಲೈನ್‌ಗಳನ್ನು ಹಾನಿಗೊಳಿಸಿವೆ. ಕೆರೆ ಬದಿಯನ್ನು ಹಾಳು ಮಾಡಿವೆ. ಗದ್ದೆಗೆ ಆಗಮಿಸಿದ ಕಾಡಾನೆಯ ಹಿಂಡುಗಳು ಕಾಫಿ, ಅಡಿಕೆ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ನಷ್ಟಪಡಿಸಿವೆ. ನಿರಂತರ ಕಾಡಾನೆಗಳ ಉಪಟಳಗಳಿಂದ ನೊಂದ ರೈತರು ನಲ್ಲೂರಿನ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.

ಕಳೆದ ಮೂರು ದಿನಗಳಿಂದ ನಲ್ಲೂರು ಗ್ರಾಮದ ಪುಚ್ಚಿಮಾಡ ಮುತ್ತಪ್ಪ, ಚನ್ನಪಂಡ ಕೆ. ಸುಬ್ಬಯ್ಯ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರ ಗದ್ದೆಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಯ ಹಿಂಡುಗಳು ರಾತ್ರಿಯ ವೇಳೆಯಲ್ಲಿ ಲಗ್ಗೆ ಇಟ್ಟು ಭತ್ತ, ಶುಂಠಿ ಗದ್ದೆಯನ್ನು ಹಾನಿಪಡಿಸಿ ಭತ್ತದ ತೆನೆಗಳನ್ನು ಮನಬಂದAತೆ ತಿನ್ನುತ್ತ ಧ್ವಂಸಗೊಳಿಸಿವೆ. ಈ ಭಾಗದಲ್ಲಿ ನಿರಂತರ ಕಾಡಾನೆಯ ಉಪಟಳ ವಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿ ಅರಣ್ಯ ಇಲಾಖೆಯ ಕಾರ್ಯ ವೈಖರಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ನಲ್ಲೂರು ಶಾಖೆಯ ವತಿಯಿಂದ ದಿಢೀರ್ ಪ್ರತಿಭಟನೆ ನಡೆಸಿ ಕ್ರಮಕ್ಕೆ ಒತ್ತಾಯಿಸಲಾಯಿತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಮೀಪದ ಧನುಗಾಲ ಮಾಯಮುಡಿಯ ಮುರುಡೇಶ್ವರ ದೇವರ ಕಾಡಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಭರವಸೆ ನೀಡಿದರು.

ಕಾಡಾನೆಯ ಹಿಂಡು ರಾತ್ರಿ ೧೦ ಗಂಟೆಯ ನಂತರ ನಲ್ಲೂರು ಗ್ರಾಮದ ರೈತರ ಗದ್ದೆಗಳತ್ತ ಮುಖ ಮಾಡುತ್ತಿದ್ದು, ಮುಂಜಾನೆಯ ವೇಳೆ ಮತ್ತೆ ದೇವರ ಕಾಡಿನತ್ತ ತೆರಳಿ ಆಶ್ರಯ ಪಡೆಯುತ್ತಿವೆ. ಇದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ.

ನಲ್ಲೂರಿನ ಜಂಕ್ಷನ್ ಬಳಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡ ತೀತರಮಾಡ ರಾಜ, ಮಲ್ಚೀರ ಗಿರೀಶ್, ಅಶೋಕ್, ಅನಿಲ್, ಬೋಪಣ್ಣ, ಹ್ಯಾರಿ, ಹರೀಶ್, ಪುಚ್ಚಿಮಾಡ ಸುನೀಲ್, ಸಂತೋಷ್, ಚೆಟ್ರುಮಾಡ ಮಾಮುಣಿ ಉತ್ತಪ್ಪ, ಪುಳ್ಳಂಗಡ ವಿವೇಕ್, ಸುರೇಶ್, ಚೆಟ್ರುಮಾಡ ರಾಬಿನ್, ಪೊನ್ನಿಮಾಡ ರಾಮುಣಿ, ಕೊಡಚ್ಚಿಮಾಡ ಉತ್ತಯ್ಯ, ಬಲ್ಲಿಮಾಡ ಮಹೇಶ್‌ಕುಮಾರ್, ಸುನೀಲ್ ಸೇರಿದಂತೆ ಇನ್ನಿತರ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

-ಹೆಚ್.ಕೆ. ಜಗದೀಶ್