ಮಡಿಕೇರಿ, ಅ. ೧೮: ನಗರದ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಕಮಲಾಪುರ ತಾಲೂಕಿನ ಮುರ್ಕಿ ಗ್ರಾಮದ ಬಿ.ಟಿ. ಪ್ರದೀಪ್ (೨೩) ಎಂಬಾತನೆ ಸಾವಿಗೆ ಶರಣಾದ ವಿದ್ಯಾರ್ಥಿ.

೨೦೧೬ನೇ ಬ್ಯಾಚ್ ವಿದ್ಯಾರ್ಥಿ ಯಾಗಿದ್ದ ಪ್ರದೀಪ್ ಪ್ರಥಮ ವರ್ಷದಲ್ಲಿ ಮಾತ್ರ ಉತ್ತೀರ್ಣನಾಗಿದ್ದು, ಉಳಿದ ವರ್ಷಗಳಲ್ಲಿ ಉತ್ತೀರ್ಣ ನಾಗಿರಲಿಲ್ಲ ಎನ್ನಲಾಗಿದೆ. ಹಲವಾರು ಬಾರಿ ಪ್ರಯತ್ನಿಸಿದರೂ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಬಗ್ಗೆ ಪ್ರದೀಪ್ ಕಾಲೇಜಿನಲ್ಲಿ

(ಮೊದಲ ಪುಟದಿಂದ) ಕೆಲವರೊಂದಿಗೆ ಅಳಲು ತೋಡಿ ಕೊಂಡಿದ್ದುದಾಗಿ ತಿಳಿದು ಬಂದಿದೆ.

ಹಾಸ್ಟೆಲ್‌ನಲ್ಲೂ ತನ್ನೊಂದಿಗಿದ್ದ ಸಹಪಾಠಿ ವ್ಯಾಸಂಗ ಮುಗಿಸಿ ಬೇರೆಡೆ ತೆರಳಿದ ಬಳಿಕ ಈತ ಒಬ್ಬನೇ ಹಾಸ್ಟೆಲ್‌ನ ರೂಂನಲ್ಲಿ ವಾಸವಿದ್ದ. ಇತ್ತೀಚೆಗೆ ಊರಿಗೆ ತೆರಳಿದ್ದ ಪ್ರದೀಪ್ ತಾ. ೧೪ರ ಆಯುಧ ಪೂಜೆಯಂದು ಹಾಸ್ಟೆಲ್‌ಗೆ ಮರಳಿದ್ದಾನೆ. ಬಳಿಕ ಆತನ ಸಹೋದರ ಕರೆ ಮಾಡಿದ್ದು, ಕರೆ ಸ್ವೀಕಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಚಿನ್ ಎಂಬ ಪರಿಚಿತ ವಿದ್ಯಾರ್ಥಿಗೆ ಕರೆ ಮಾಡಿದ ಪ್ರದೀಪ್‌ನ ಸಹೋದರ ಪ್ರದೀಪ್ ಕರೆ ಸ್ವೀಕರಿಸದ ಬಗ್ಗೆ ತಿಳಿಸಿದ್ದು, ರೂಮ್ ಬಳಿ ತೆರಳಿ ನೋಡುವಂತೆ ಮನವಿ ಮಾಡಿದ್ದರಿಂದ ಸಚಿನ್ ತೆರಳಿ ರೂಮ್‌ನ ಬಾಗಿಲು ಬಡಿದಿದ್ದಾನೆ.

ಈ ಸಂದರ್ಭ ಬಾಗಿಲು ತೆರೆಯದ ಕಾರಣ ಸಚಿನ್ ವಾರ್ಡನ್‌ಗೆ ಮಾಹಿತಿ ನೀಡಿದ್ದು, ಬಳಿಕ ಬಾಗಿಲಿನ ಪಕ್ಕದಲ್ಲಿದ್ದ ಕಿಟಕಿ ತೆಗೆದು ನೋಡಿದಾಗ ಪ್ರದೀಪ್ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬAದಿದೆ. ಮಾನಸಿಕ ಖಿನ್ನತೆಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.