ಗೋಣಿಕೊಪ್ಪಲು, ಅ. ೧೮: ಗೋಣಿಕೊಪ್ಪ ಮಾರುಕಟ್ಟೆ ಆವರಣದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಉಬೈದ್ ಎಂಬವರ ಅಂಗಡಿ ಮಳಿಗೆಗೆ ಬೆಂಕಿ ಕಾಣಿಸಿಕೊಂಡು ಅಪಾರ ನಷ್ಟ ಸಂಭವಿಸಿದೆ.

ಸೋಮವಾರ ಮುಂಜಾನೆ ೬.೩೦ರ ಸುಮಾರಿಗೆ ಮಾರುಕಟ್ಟೆ ಆವರಣದಲ್ಲಿರುವ ಇತರರು ದೈನಂದಿನ ವ್ಯಾಪಾರ ಮಾಡಲು ಆಗಮಿಸಿದಾಗ ಅಂಗಡಿ ಮಳಿಗೆಯಿಂದ ಹೊಗೆ ಬರುವುದನ್ನು ಕಂಡು ಕೂಡಲೇ ಅಂಗಡಿ ಮಾಲೀಕ ಉಬೈದ್‌ಗೆ ಫೋನ್ ಮಾಡಿ ವಿಷಯ ತಿಳಿಸಿದರು.

ನಂತರ ಅಂಗಡಿಯ ಬೀಗ ಒಡೆದ ನಾಗರಿಕರು ಸಮೀಪದ ನಲ್ಲಿಯಿಂದ ನೀರು ತಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಅಷ್ಟೊತ್ತಿಗಾಗಲೇ ಬೆಂಕಿಯು ಮಳಿಗೆಯ ಸುತ್ತಲೂ ಆವರಿಸಿಕೊಂಡು ಬೆಲೆ ಬಾಳುವ ಸೀರೆ, ಇತರೆ ಬಟ್ಟೆಗಳು ಬೆಂದು ಕರಕಲಾಗಿವೆ.

ಸುದ್ದಿ ತಿಳಿದ ಗ್ರಾಮ ಪಂಚಾಯಿತಿ ಸದಸ್ಯ ಕೆ. ರಾಜೇಶ್ ಘಟನಾ ಸ್ಥಳಕ್ಕೆ ಆಗಮಿಸಿ ಚೆಸ್ಕಾಂ ಸಿಬ್ಬಂದಿಗಳನ್ನು ಕರೆಸಿ ವಿದ್ಯುತ್ ನಿಲುಗಡೆ ಮಾಡಿಸಿದರು.

ರಾತ್ರಿ ವೇಳೆ ಘಟನೆ ನಡೆದಿದ್ದಲ್ಲಿ ಸಮೀಪದ ಮಳಿಗೆಗಳಿಗೆ ಬೆಂಕಿ ವಿಸ್ತರಿಸುವ ಸಾಧ್ಯತೆ ಹೆಚ್ಚಿತ್ತು. ವಿದ್ಯುತ್ ಪೂರೈಕೆಯ ವ್ಯತ್ಯಾಸದಿಂದ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅನಾಹುತ ನಡೆದಿದೆ ಎಂದು ತಿಳಿದು ಬಂದಿದೆ.

ಕೆಲವು ತಿಂಗಳ ಹಿಂದೆ ಬಟ್ಟೆ ಮಳಿಗೆ ಆರಂಭಿಸಿದ್ದ ಉಬೈದ್ ಹಬ್ಬದ ಸಮಯದಲ್ಲಿ ಹಲವಾರು ಬೆಲೆ ಬಾಳುವ ಸೀರೆ ಹಾಗೂ ಇತರೆ ಬಟ್ಟೆಗಳನ್ನು ತಂದು ಮಾರಾಟಕ್ಕೆ ಅಣಿಯಾಗಿಟ್ಟಿದ್ದರು. ಚೆಸ್ಕಾಂ ಇಲಾಖೆಯ ಇಂಜಿನಿಯರ್ ಕೃಷ್ಣಕುಮಾರ್, ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. - ಹೆಚ್.ಕೆ. ಜಗದೀಶ್