ಮಡಿಕೇರಿ, ಅ. ೧೮: ಒಂದು ಜನಾಂಗದ ಭಾಷೆ ಉಳಿದರೆ ಮಾತ್ರ ಆ ಜನಾಂಗ ಉಳಿಯಲು ಸಾಧ್ಯವೆಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕುಟ್ಟ ಕೊಡವ ಸಮಾಜದಲ್ಲಿ ನಡೆದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ‘ನಾಡ ಪೆದ ಆಶಾ’ ಕೊಡವ ಚಲನಚಿತ್ರದ ೭೫ನೇ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಜೀವಂತವಾಗಿಟ್ಟಾಗ ಜನಾಂಗದ ಉಳಿವು ಸಾಧ್ಯ. ಕೊಡವ ಜನಾಂಗ ಇಡೀ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು, ಈ ಜನಾಂಗದ ಉಳಿವಿಗೆ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅನಿವಾರ್ಯ ಇದೆ. ಕೊಡವ ಭಾಷೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳಿವೆ ಎಲ್ಲರೂ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.
ಚಿತ್ರದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್, ನಾಯಕ ನಟ ಬೊಳ್ಳಜಿರ ಬಿ. ಅಯ್ಯಪ್ಪ, ನಟಿ ಬೊಳ್ಳಜಿರ ಯಮುನಾ ಅಯ್ಯಪ್ಪ, ಬಾಲನಟಿ ಈರಮಂಡ ಖುಷಿ ಕಾವೇರಮ್ಮ, ಪ್ರಮುಖರಾದ ವಿಜಯ್ ಉತ್ತಯ್ಯ ಮತ್ತಿತರರು ಉಪಸ್ಥಿತರಿದ್ದರು.