ಕೂಡಿಗೆ, ಅ. ೧೮: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಾರಂಗಿ ಜಲಾಶಯದಿಂದ ನೀರು ಬಿಡುಗಡೆಯ ಎಚ್ಚರಿಕೆಯ ಗಂಟೆಯ ಕೇಂದ್ರವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ಮಳೆಗಾಲದಲ್ಲಿ ಹಾರಂಗಿ ಜಲಾಶಯದ ನೀರು ಬಿಡುಗಡೆಯ ಸಂದರ್ಭದಲ್ಲಿ ಶಬ್ಧ (ಸೈರನ್) ಮಾಡಿ ಸ್ಥಳೀಯ ಆಯಕಟ್ಟಿನ ಜನರಿಗೆ ಎಚ್ಚರಿಕೆ ನೀಡುವುದರೊಂದಿಗೆ ಕೂಡಿಗೆಯಿಂದ ಐದು ಕಿಲೋಮೀಟರ್ ಸುತ್ತಮುತ್ತಲಿನ ಪ್ರದೇಶದ ಸ್ಥಳದವರೆಗೆ ಶಬ್ಧವು ವ್ಯಾಪಿಸಲಿದೆ ಇದರಿಂದಾಗಿ ಮುನ್ನೆಚ್ಚರಿಕೆ ವಹಿಸಲು ಅನುಕೂಲವಾಗುವುದು ಎಂದು ಶಾಲೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ನದಿಗೆ ಹೆಚ್ಚುವರಿ ನೀರನ್ನು ಹರಿಸುವ ಮೊದಲು ಜಲಾನಯನ ವ್ಯಾಪ್ತಿಯ ಕೆಳ ಭಾಗದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲು ಹಾರಂಗಿಯಲ್ಲಿ ಎಚ್ಚರಿಕೆ ಗಂಟೆಯ (ಸೈರನ್) ಮಾಡಲು ಅಲ್ಲಿನ ಗಣಕೀಕೃತ ಬಟನ್ ಒತ್ತಲಾಗುವುದು. ಅದೇ ಸಂದರ್ಭದಲ್ಲಿಯೇ ಕೂಡಿಗೆಯಲ್ಲಿರುವ ಸೈನಿಕ ಶಾಲೆಯ ಎಚ್ಚರಿಕೆ ಗಂಟೆಯು ಸಹ ಶಬ್ದ ಮಾಡುವುದು. ಇದರಲ್ಲಿ ಹೊಸ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್, ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಆರ್. ಮಂಜುಳ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಹಾಜರಿದ್ದರು.