ವೀರಾಜಪೇಟೆ, ಅ. ೧೬: ವೀರಾಜಪೇಟೆ ಸಮೀಪದ ಮೈತಾಡಿ ಗ್ರಾಮದ ನಾಂಗಾಲ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ವಿಜಯದಶಮಿ ಪ್ರಯುಕ್ತ ಶ್ರೀ ದುರ್ಗಿ ದೇವಿಯ ಆರಾಧನೆ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಶ್ರೀ ದುರ್ಗಿ ದೇವಿಯ ಆರಾಧನೆ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಹಾಗೂ ಅಲಂಕಾರ ಪೂಜೆಗಳು ನಡೆದು ಮಧ್ಯಾಹ್ನ ೧೨-೩೦ಕ್ಕೆ ಮಹಾಪೂಜೆ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ವಿಶೇಷ ಆಹ್ವಾನಿತರಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅವರಿಗೆ ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ವೀಣಾ ಅಚ್ಚಯ್ಯ ಅವರು ಮಾತನಾಡಿ; ಗ್ರಾಮೀಣ ಭಾಗದಲ್ಲಿ ಉತ್ತಮ ಪರಿಸರದಲ್ಲಿರುವ ಮೈತಾಡಿ ನಾಂಗಾಲ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಇನ್ನು ಮುಂದೆಯು ಹೆಚ್ಚಿನ ಅಭಿವೃದ್ಧಿಗೆ ರೂ, ೩ ಲಕ್ಷ ಸ್ವತ ಅನುದಾನವನ್ನು ನೀಡುವುದಾಗಿ ತಿಳಿಸಿದರು. ಬೊಳ್ಳಚಂಡ ಸ್ಮಿತಾ ಪ್ರಕಾಶ್ ಮಾತನಾಡಿ; ಈ ದೇವಸ್ಥಾನದ ಅಭಿವೃದ್ಧಿಗಾಗಿ ಈಗಾಗಲೆ ರೂ. ೨ ಲಕ್ಷ ಅನುದಾನ ನೀಡಿರುವುದಾಗಿ ತಿಳಿಸಿದರು. ಪೂಜಾಕಾರ್ಯದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಡಿಂಞರAಡ ಜಿ.ಅಯ್ಯಪ್ಪ, ಉಪಾಧ್ಯಕ್ಷ ಚಪ್ಪಂಡ ಹರೀಶ್, ಕಾರ್ಯದರ್ಶಿ ಅಯ್ಯಮಂಡ ವೇಣು ಕಾವೇರಪ್ಪ, ಸಮಿತಿಯ ಸದಸ್ಯರುಗಳು, ಗ್ರಾಮಸ್ಥರು ಮತ್ತು ದೂರದ ಊರುಗಳಿಂದಲೂ ಭಕ್ತಾದಿಗಳು ಭಾಗವಹಿಸಿದ್ದರು.