*ಗೋಣಿಕೊಪ್ಪ, ಅ. ೧೬: ತಿತಿಮತಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ತಿತಿಮತಿ ಮಹಿಳಾ ಸಮಾಜದ ಆವರಣದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗ್ರಂಥಾಲಯಕ್ಕೆ ಹೊಸ ರೂಪದೊಂದಿಗೆ ಗ್ರಾಮ ಪಂಚಾಯಿತಿ ೧೫ನೇ ಹಣಕಾಸು ಯೋಜನೆ ಮತ್ತು ಗ್ರಾ.ಪಂ. ಸ್ವಂತ ನಿಧಿಯನ್ನು ಬಳಸಿ ಮಾದರಿ ಗ್ರಂಥಾಲಯವನ್ನು ನಿರ್ಮಿಸಿದೆ.
ಹೀಗಾಗಿ ತಿತಿಮತಿಯ ಪುಸ್ತಕ ಮನೆ ಉನ್ನತೀಕರಣಗೊಂಡು ಸ್ಥಳೀಯ ಓದುಗರಿಗೆ ಮಾದರಿ ಗ್ರಂಥಾಲಯವಾಗಿ ಅನುಕೂಲ ಕಲ್ಪಿಸುತ್ತಿದೆ ಎಂದು ಶಾಸಕರು ತಿಳಿಸಿದರು. ಗ್ರಂಥಾಲಯದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಉತ್ತಮ ಪುಸ್ತಕಗಳು ಹೊಂದಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಂಡು ತಮ್ಮ ಅರಿವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿಜಿಟಲ್ ಕಾರಣದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಾಲತಾಣ ಇ ಸಾರ್ವಜನಿಕ ಗ್ರಂಥಾಲಯ ಆ್ಯಪ್ ಮೂಲಕ ಇ ಪುಸ್ತಕಗಳು, ಶೈಕ್ಷಣಿಕ ವೀಡಿಯೋಗಳು ಲಭ್ಯವಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಶೈಕ್ಷಣಿಕ ಮತ್ತು ಭೌತಿಕ ಮೌಲ್ಯವನ್ನು ಹೆಚ್ಚಿಸುವಲ್ಲಿ ಮಹತ್ತರವಾಗಿದೆ ಎಂದು ಹೇಳಿದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಗ್ರಾ.ಪಂ. ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ವಿಜಯ, ಗ್ರಾ.ಪಂ. ಸದಸ್ಯ ಹಾಗೂ ಶಕ್ತಿ ಕೇಂದ್ರದ ಪ್ರಮುಖ್ ಎನ್.ಎನ್. ಅನೂಪ್‌ಕುಮಾರ್, ಸದಸ್ಯರುಗಳಾದ ಚುಬ್ರು, ಶಂಕರ, ಸರಸ್ವತಿ, ರಾಜೇಶ್ವರಿ, ಅಫ್ರೋಝ್, ಶ್ಯಾಮಲ, ಚಂದ್ರಶೇಖರ, ಪೊನ್ನು, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಚೆಪುö್ಪಡಿರ ಕಾರ್ಯಪ್ಪ, ಕಾಫಿ ಬೆಳೆಗಾರರಾದ ಜಿ.ಜೆ ವಿನಯಕುಮಾರ್, ವಿ.ಎಸ್. ಸತೀಶ್, ಮಾಜಿ ಗ್ರಾ.ಪಂ. ಸದಸ್ಯ ಸಿ.ಜೆ. ವಿಲ್ಸನ್, ಪ್ರಮುಖರಾದ ಎಂ.ಎನ್. ಕೃಷ್ಣ, ಅಪ್ಪಿಶಿವು, ಗ್ರಂಥಪಾಲಕ ರಾಜು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಜಗದೀಶ್, ಪಂಚಾಯಿತಿ ಸಿಬ್ಬಂದಿಗಳಾದ ಉಮೇಶ, ಮಾದು, ಶ್ರೀನಿವಾಸ್ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.
- ಎನ್.ಎನ್. ದಿನೇಶ್