ಗೋಣಿಕೊಪ್ಪ ವರದಿ, ಅ. ೧೬: ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವೇಕಾನಂದ ಫೌಂಡೇಷನ್ ವತಿಯಿಂದ ಸುಮಾರು ೧೦೦ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಗರ್ಭಿಣಿ, ಕಡಿಮೆ ತೂಕದ ಮಕ್ಕಳು, ಅಂಗವೈಕಲ್ಯ, ಮಾನಸಿಕ ಅಸ್ವಸ್ಥರು, ಟಿ. ಬಿ ರೋಗಿಗಳು, ಹೆಚ್‌ಐವಿ ಪಾಸಿಟಿವ್ ಇರುವವರು, ಇದರ ಲಾಭ ಪಡೆದುಕೊಂಡು. ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಸೋಲಾರ್ ದೀಪ ನೀಡಲಾಯಿತು. ಸ್ಥಳೀಯ ಆರೋಗ್ಯ ಸಹಾಯಕಿಯರಿಗೆ ದ್ವಿಚಕ್ರ ವಾಹನ ಖರೀದಿಗೆ ತಲಾ ೧೦ ಸಾವಿರ ಸಹಾಯಧನ ವಿತರಿಸಲಾಯಿತು.
ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಆರೈಕೆ ಅಧಿಕಾರಿ ಡಾ. ಗೋಪಿನಾಥ್ ಮಾತನಾಡಿ, ಕೋವಿಡ್ ಲಸಿಕೆ ಪಡೆದವರು ಕೊರೊನಾದಿಂದ ಜೀವ ಉಳಿಸಿಕೊಳ್ಳಲು ಸಾಧ್ಯವಿದೆ ಎಂಬುವುದು ಸಾಕಷ್ಟು ನಿದರ್ಶನದಿಂದ ಸಾಬೀತಾಗಿದೆ. ಇದರಿಂದಾಗಿ ಲಸಿಕೆ ಪಡೆಯಲು ಹಿಂದೇಟು ಹಾಕಬೇಡಿ ಎಂದು ಮನವಿ ಮಾಡಿಕೊಂಡರು. ಆಸ್ಪತ್ರೆ ಹೆರಿಗೆಗೆ ಆದ್ಯತೆ ನೀಡಬೇಕು. ತಾಯಿ, ಮಗುವಿನ ರಕ್ಷಣೆಗೆ ಮುಂದಾಗಬೇಕು ಎಂದರು.
ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಮಾತನಾಡಿ, ಪೌಷ್ಟಿಕಾಂಶ ಆಹಾರ ಸೇವನೆ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ. ಹೆಚ್ಚು ತರಕಾರಿ, ಹಣ್ಣು, ಕಾಳು ಸೇವಿಸುವಂತೆ ಸಲಹೆ ನೀಡಿದರು.
ಕೋವಿಡ್ ನಿಯಂತ್ರಣ ಅಧಿಕಾರಿ ಡಾ. ಮಹೇಶ್, ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಸುನಿಲ್ ನಾಯಕ, ಆಡಳಿತ ಅಧಿಕಾರಿ ಅರ್ಜುನ್, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಶಿವಯ್ಯ, ಶುಶ್ರೂಷಕಿ ಸುಮಿತ್ರ, ನಿಯಂತ್ರಣಾಧಿಕಾರಿ ಸಿದ್ದರಾಜು, ಸ್ಥಳೀಯ ಗ್ರಾ.ಪಂ. ಸದಸ್ಯ ಅನೂಪ್, ಚುಬ್ರು ಇದ್ದರು.