ಸೋಮವಾರಪೇಟೆ, ಅ. ೧೬: ತಾಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಾಸನ ಜಿಲ್ಲೆಯ ಸೆಂಟರ್ ಫಾರ್ ಎಜುಕೇಶನ್, ಎನ್ವಿರಾನ್‌ಮೆಂಟ್ ಆ್ಯಂಡ್ ಕಮ್ಯುನಿಟಿ (ಸೀಕೋ) ಸಂಸ್ಥೆಯ ವತಿಯಿಂದ ಔಷಧಿ ವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಔಷಧಿ ವನ ನಿರ್ಮಾಣಕ್ಕೆ ಚಾಲನೆ ನೀಡಿದ ಸೀಕೋ ಸಂಸ್ಥೆ ಮುಖ್ಯಸ್ಥ ಡಾ. ಬಿ.ಕೆ. ಹರೀಶ್ ಕುಮಾರ, ಸೀಕೋ ಸಂಸ್ಥೆಯು ಕೊಡಗಿನ ವಿವಿಧ ಶಾಲೆಗಳಲ್ಲಿ ಈಗಾಗಲೇ ಔಷಧಿ ವನ, ಹೂದೋಟ, ಸಾವಯವ ಕೈತೋಟಗಳನ್ನು ನಿರ್ಮಿಸಿದೆ. ಅದರ ಮುಂದುವರಿದ ಭಾಗವಾಗಿ ನೇರುಗಳಲೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೃಷ್ಣೆಗೌಡರು, ಕನ್ನಡ ಶಿಕ್ಷಕ ರತ್ನಕುಮಾರ್ ಈ ಶಾಲೆಯಲ್ಲಿಯೂ ಔಷಧಿ ವನ ನಿರ್ಮಿಸಲು ಪ್ರಸ್ತಾಪವಿಟ್ಟಿದ್ದರು. ಅದರಂತೆ ನೇರುಗಳಲೆ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳ ಅಂಗವಾಗಿ ಔಷಧಿ ವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಪರಿಸರ ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣ ನೀಡುವುದು ಹೆಚ್ಚಿನ ಪ್ರಾಮುಖ್ಯತೆ ಪಡೆದಿದ್ದು, ಔಷಧಿ ಗಿಡಗಳ ಮಹತ್ವ ಮತ್ತು ಸ್ವಯಂ ಸಂರಕ್ಷಣೆಯಲ್ಲಿ ಪಾಲ್ಗೊಳ್ಳು ವಿಕೆಯಿಂದಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವಿಜ್ಞಾನ ಕಲಿಕೆಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಕನ್ನಡ ಶಿಕ್ಷಕ ರತ್ನಕುಮಾರ ಮಾತನಾಡಿ, ಸೀಕೋ ಸಂಸ್ಥೆಯು ಕೊಡಗಿನ ವಿವಿಧ ಶಾಲೆಗಳಲ್ಲಿ ಪರಿಸರ ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣ ನೀಡುವ ಮಾದರಿ ಪರಿಚಯಿಸಿದ್ದರು. ಕೊಠಡಿಯೊಳಗಿನ ಕಲಿಕೆಯ ಜೊತೆಗೆ ನಮ್ಮದೇ ಪರಿಸರದಲ್ಲಿ ಪರಿಸರವನ್ನು ಚಟುವಟಿಕೆಗಳ ಮೂಲಕ ಕಲಿಯು ವುದು ಪರಿಣಾಮಕಾರಿಯಾಗಿರುತ್ತದೆ. ಹಾಗಾಗಿ ನಮ್ಮ ಶಾಲೆಯಲ್ಲಿಯೂ ಪರಿಸರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಕೋರಲಾಗಿತ್ತು. ಈಗ ನಮ್ಮ ಶಾಲೆ ಆವರಣದಲ್ಲಿ ಔಷಧಿ ವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಶಾಲೆಯಲ್ಲಿ ಸೀಕೋ ಸಂಸ್ಥೆಯು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ನೇರುಗಳಲೆ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ನಾಮನಿರ್ದೇಶಿತ ಸದಸ್ಯ ಟಿ.ಕೆ. ಲೋಕಾನಂದ ಮಾತನಾಡಿ, ಪರಿಸರ ಚಟುವಟಿಕೆಗಳು ಕೇವಲ ಶಾಲೆಗಳಲ್ಲಿ ಮಾತ್ರ ನಡೆಯದೆ, ಎಲ್ಲಾ ಗ್ರಾಮಗಳಲ್ಲೂ ನಡೆಯಬೇಕಿದೆ. ಗ್ರಾಮಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ಸೀಕೋ ಸಂಸ್ಥೆಯು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಪದ್ಮಾವತಿ, ಗ್ರಾ.ಪಂ. ಸದಸ್ಯ ವಿನಯ್ ಸಂಭ್ರಮ್, ಗ್ರಾ.ಪಂ. ಸದಸ್ಯ ಮತ್ತು ನೇರುಗಳಲೆ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಕೆ. ಅಜಿತ್‌ಕುಮಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.