ನಾಪೋಕ್ಲು, ಅ. ೧೫: ಕಟ್ಟಡ ಕಾಮಗಾರಿ ಮುಗಿದು ವರ್ಷಗಳೇ ಉರುಳಿದರೂ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ನಿರ್ಮಿಸಲಾದ ದೇವಳದ ಪ್ರವಾಸಿ ಮಂದಿರಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ದೊರೆಯಲಿಲ್ಲ. ಪ್ರವಾಸಿಗರ ಅನುಕೂಲಕ್ಕಾಗಿ ದೇವಳ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಪ್ರವಾಸಿ ಮಂದಿರಕ್ಕೆ ೨೦೧೬ನೇ ಇಸವಿಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡುರಾವ್ ಭೂಮಿಪೂಜೆ ನೆರವೇರಿಸಿದ್ದರು.
ಕಟ್ಟಡ ಕಾಮಗಾರಿಯೂ ಬಿರುಸಿನಿಂದಲೇ ಆರಂಭಗೊAಡಿತ್ತು. ಒಳಭಾಗದಲ್ಲಿ ಒಂದು ವರಾಂಡ, ಎಡಕ್ಕೆ ನಾಲ್ಕು, ಬಲಕ್ಕೆ ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿಗೆ ಹಣದ ಕೊರತೆ ಉಂಟಾದಾಗ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ವ್ಯವಸ್ಥಾಪನಾ ಸಮಿತಿಯಿಂದ ೧೬ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಕಳಪೆ ಕಾಮಗಾರಿ: ಕಟ್ಟಡ ಉದ್ಘಾಟನೆಗೊಳ್ಳುವ ಮೊದಲೇ ಕಳಪೆ ಕಾಮಗಾರಿಯ ಕಾರಣದಿಂದ ಒಳಭಾಗ ಪೂರ್ತಿಯಾಗಿ ಸೋರುತ್ತಿದ್ದು, ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ನಿಂತು ಕೆರೆಯಂತಾಗುತ್ತಿದೆ. ಕೊಠಡಿ ಬಾಗಿಲುಗಳು ಸಂಪೂರ್ಣ ಹಾಳಾಗಿ ಪುನಃ ದುರಸ್ತಿಪಡಿಸಲಾಗಿದೆ. ಹಿಂದಿನ ಮೂರು ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಪ್ರವಾಸಿ ಮಂದಿರವನ್ನು ಪರಿಶೀಲಿಸಿದ್ದರು. ಆದರೆ ದುರಸ್ತಿಗೆ, ಉದ್ಘಾಟನೆಗೆ ಯಾವದೇ ಕ್ರಮಕೈಗೊಳ್ಳದಿರುವದು ಮಾತ್ರ ದುರಾದೃಷ್ಟ.
ಊಟ ತಿಂಡಿಗೆ ವ್ಯವಸ್ಥೆ ಇಲ್ಲ: ಈ ಪ್ರವಾಸಿ ಕೇಂದ್ರದಲ್ಲಿ ಎಂಟು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಊಟ ತಿಂಡಿಗೆ ಇಲ್ಲಿ ಯಾವದೇ ವ್ಯವಸ್ಥೆ ಕೈಗೊಂಡಿಲ್ಲ. ಪ್ರವಾಸಿ ಮಂದಿರದಿAದ ಇಗ್ಗುತ್ತಪ್ಪ ದೇವಳಕ್ಕೆ ಅಂದಾಜು ಅರ್ಧ ಕಿ.ಮೀ ದೂರವಿದೆ. ದೇವಳದಲ್ಲಿ ಮಧ್ಯಾಹ್ನದ ಊಟ ಮಾತ್ರ ದೊರೆಯುತ್ತದೆ. ಇತರ ಸಮಯದಲ್ಲಿ ಪ್ರವಾಸಿಗರ ಅಗತ್ಯ ತಿಂಡಿ, ತಿನಿಸುಗಳಿಗೆ ಏನು ಮಾಡುವದು ಎಂಬ ಪ್ರಶ್ನೆ ಇಲ್ಲಿ ಮೂಡಿದೆ. - ಪಿ.ವಿ. ಪ್ರಭಾಕರ್