ಭಾಗಮಂಡಲ, ಅ. ೧೫: ಕಾವೇರಿ ತೀರ್ಥೋದ್ಭವಕ್ಕಾಗಿ ದಿನಗಣನೆ ಆರಂಭವಾಗಿದ್ದು ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಗುರುವಾರ ಬೆಳಿಗ್ಗೆ ೧೧.೫೦ ರ ವೇಳೆಗೆ ನಂದಾದೀಪವನ್ನು ಬೆಳಗಿಸಲಾಯಿತು. ೧೨ಕ್ಕೆ ಧನು ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸಿ ೧.೨೫ಕ್ಕೆ ಕಾಣಿಕೆ ಡಬ್ಬ ಇಡಲಾಯಿತು. ಶುಕ್ರವಾರ ಕಾವೇರಿ ಮಾತೆಗೆ ಆಭರಣಗಳನ್ನು ನಾದಸ್ವರ ದೊಂದಿಗೆ ಭಾಗಮಂಡಲದಿAದ ತಲಕಾವೇರಿಗೆ ಕೊಂಡೊಯ್ಯಲಾಯಿತು. ಗುರುವಾರ ಬೆಳಿಗ್ಗೆ ದೇವಾಲಯದ ತಕ್ಕರು ಹಾಗೂ ತಲಕಾವೇರಿ ಭಾಗಮಂಡಲ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ತಲಕಾವೇರಿ ದೇವಾಲಯದ ತಕ್ಕುದಾದ ಕೋಡಿ ಮೋಟಯ್ಯ ನಂದಾದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಾಲಯದಲ್ಲಿ ತುಪ್ಪದ ನಂದಾದೀಪವು ನಿರಂತರವಾಗಿ ನವೆÀಂಬರ್ ೧೭ರವರೆಗೆ ಒಂದು ತಿಂಗಳ ಕಾಲ ಬೆಳಗಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ದೇವಾಲಯದಲ್ಲಿ ನಡೆಯುವ ಧಾರ್ಮಿಕ ವಿಧಿವಿಧಾನ ಗಳಿಗೆ ಯಾವುದೇ ವಿಘ್ನಗಳು ಬಾರದಂತೆ ಪ್ರಾರ್ಥಿಸಲಾಯಿತು. ದೇವಾಲಯದ ಅಕ್ಷಯಪಾತ್ರೆಗೆ ಅಕ್ಕಿಯನ್ನು ಸುರಿದು ಭಕ್ತರಿಗೆ ಪಡಿಯಕ್ಕಿ ವಿತರಿಸಲಾಯಿತು. ಭಕ್ತರು ಬೆಳೆದ ಅಕ್ಕಿಯನ್ನು ಅಕ್ಷಯಪಾತ್ರೆಗೆ ಸುರಿದು ಪಡಿಯಕ್ಕಿ ರೂಪದಲ್ಲಿ ಪ್ರಸಾದವಾಗಿ ಒಂದು ತಿಂಗಳ ಕಾಲ ವಿತರಿಸಲಾಗುತ್ತದೆ. ಅಕ್ಷಯ ಪಾತ್ರೆಯಿಂದ ಕೊಂಡೊಯ್ದ ಅಕ್ಕಿಯಿಂದ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದು. ಅಕ್ಷಯ ಪಾತ್ರೆಯಿಂದ ಕೊಂಡೊಯ್ಯುವ ಪ್ರಸಾದ ರೂಪದ ಪಡಿಯಕ್ಕಿಯನ್ನು ಭಕ್ತರು ಮನೆಯಲ್ಲಿ ಇರಿಸಿ ಪಾಯಸ ರೂಪದಲ್ಲಿ ಸೇವಿಸುತ್ತಾರೆ. ಇಂದು ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಅವರು ಕಾವೇರಿ ಮಾತೆಯನ್ನು ಅಲಂಕರಿಸಲು ಆಭರಣಗಳನ್ನು ಪಡೆದುಕೊಂಡರು. ಭಾಗಮಂಡಲ ದೇವಾಲಯದಲ್ಲಿ ಪ್ರದಕ್ಷಿಣೆ ಬಂದು ದೇವಾಲಯದಿಂದ ಮಾರ್ಕೆಟ್ ಬಳಿಯವರೆಗೆ ನಾದಸ್ವರದೊಂದಿಗೆ ತೆರಳಿ ಭಕ್ತರ ಸಮ್ಮುಖದಲ್ಲಿ ಚಿನ್ನಾಭರಣಗಳನ್ನು ಕೊಂಡೊಯ್ಯ ಲಾಯಿತು. ಈ ಆಭರಣಗಳು ಒಂದು ತಿಂಗಳ ಕಾಲ ಕಂಗೊಳಿಸಲಿದೆ.

ಇAದು ಶಾಸಕ ಕೆ.ಜಿ. ಬೋಪಯ್ಯ ಅವರು ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿ ಜಾತ್ರೆ ಸಿದ್ಧತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭ ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ದೇವಾಲಯದ ಕೋಡಿ ಮೋಟಯ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಪಾರುಪತ್ತೆಗಾರ ಪೊನ್ನಣ್ಣ, ಮಹೇಶ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಮಿತ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಸದಸ್ಯರಾದ ಕಾಳನ ರವಿ, ದಂಡಿನ ಜಯಂತ್, ಪಿ.ಎಂ. ರಾಜೀವ್, ಕೋಳಿ ಬೈಲು ಖುಷ್ವಂತ್, ರವಿ ಹೆಬ್ಬಾರ್ ಇನ್ನಿತರರು ಇದ್ದರು.

-ಸುನಿಲ್ ಕುಯ್ಯಮುಡಿ