*ವೀರಾಜಪೇಟೆ, ಅ. ೧೫: ಕೊಡಗು ಎಜುಕೇಶನಲ್ ಮತ್ತು ಸೋಶಿಯಲ್ ಟ್ರಸ್ಟ್ ಇವರ ವತಿಯಿಂದ ಕೊಡಗಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಚೆಕ್ ವಿತರಣೆ ಕಾರ್ಯಕ್ರಮವನ್ನು ವೀರಾಜಪೇಟೆ ಕೊಡವ ಸಮಾಜದ ತ್ರಿವೇಣಿ ಶಾಲೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಪ್ರೋ. ಇಟ್ಟಿರ ಬಿದ್ದಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾನಾಡಿ, ಕೊಡಗಿನ ವಿದ್ಯಾರ್ಥಿಗಳು ಸುಮಾರು ೨೫ ವರ್ಷ ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದರೆ ಸಾಕು ಅವರು ಮುಂದೆ ಉತ್ತಮ ಜೀವನ ನಡೆಸಲು ಸಾಧ್ಯ. ನೆರವು ನೀಡುವ ಸಂಸ್ಥೆಗಳಿAದ ತಾವು ಪಡೆದ ಸಹಾಯವನ್ನು ಮುಂದಿನ ದಿನಗಳಲ್ಲಿ ತಾವು ಉತ್ತಮ ವ್ಯವಸ್ಥೆಯಲ್ಲಿ ಇದ್ದರೆ ಸಂಸ್ಥೆಯ ಋಣವನ್ನು ತೀರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಜರ್ ಜನರಲ್ ಮುತ್ತಣ್ಣ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ನಮ್ಮ ಸಂಸ್ಥೆ ಕೊರೊನಾ ಸಮಯದಲ್ಲಿ ಸುಮಾರು ೨೫೦೦ ರೂಪಾಯಿ ವೆಚ್ಚದ ೨೧೫ ಕಿಟ್‌ಗಳನ್ನು ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ ಅವರ ಮುಖಾಂತರ ನೀಡಿದೆ. ಅಲ್ಲದೆ ಆ ಸಂದರ್ಭದಲ್ಲಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ಅಂಗನ ವಾಡಿ ಕಾರ್ಯಕರ್ತೆಯರು, ಪೊಲೀಸರು, ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ, ಮಾಸ್ಕ್, ಸ್ಯಾನಿಟೈಸರ್ ನೀಡಿದ್ದೇವೆ ಎಂದರು.

ವೇದಿಕೆಯಲ್ಲಿ ತ್ರಿವೇಣಿ ಸಂಸ್ಥೆಯ ಮುಖ್ಯೋಪಾಧ್ಯಾಯರು, ಸದಾ ಚಂಗಪ್ಪ, ಸೂರಜ್ ಮಾಚಯ್ಯ, ಸುಬ್ರಮಣ್ಯ, ಬಲ್ಲಚಂಡ ರಂಜನ್ ಉಪಸ್ಥಿತರಿದ್ದರು. ಸುಮಾರು ೮೭ ಮಕ್ಕಳಿಗೆ ವಿದ್ಯಾಭ್ಯಾಸ ಅಗತ್ಯ ಚೆಕ್ ವಿತರಣೆ ಮಾಡಿದರು. ಒಟ್ಟು ಹನ್ನೆರಡು ಲಕ್ಷ ರೂಪಾಯಿಗಳ ಚೆಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತ ಭಾಷಣವನ್ನು ಗಣೇಶ್ ಪೊನ್ನಪ್ಪ ಮಾಡಿದರು. ಟ್ರಸ್ಟಿನ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.