ಮಡಿಕೇರಿ, ಅ. ೧೫: ಕಗ್ಗತ್ತಲ ನಡುವೆ ಕಣ್ಣು ಕೋರೈಸಿದ ಬೆಳಕು, ಭುವಿಗಿಳಿದ ದೇವಾನುದೇವತೆಗಳಿಂದ ಅಸುರರ ಸಂಹಾರ, ಎದೆಝಲ್ಲೆನಿಸುವ ಶಬ್ಧ, ಸರಳತೆಯ ನಡುವೆಯೂ ಸಡಗರ..
ಮಂಜಿನ ನಗರಿ ಮಡಿಕೇರಿಯಲ್ಲಿ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಐತಿಹಾಸಿಕ ನಾಡಹಬ್ಬ ದಸರಾ ಸಂಪನ್ನಗೊAಡಿತು. ಕಳೆದ ವರ್ಷವೂ ದಸರಾಕ್ಕೆ ಕೊರೊನಾ ಕಾರ್ಮೋಡ ಆವರಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಶಮಂಟಪಗಳ ಶೋಭಾಯಾತ್ರೆ ಸಂಭ್ರಮದಲ್ಲಿ ಸಾಗಿತು. ಕಳೆದ ವರ್ಷ ರಾತ್ರಿ ೧೦ ಗಂಟೆ ಹೊತ್ತಿಗೆ ಶೋಭಾಯಾತ್ರೆ ಕೊನೆಗೊಂಡಿತ್ತು. ಈ ಬಾರಿ ಮುಂಜಾನೆಯ ತನಕ ದಶಮಂಟಪಗಳು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದವು. ಇದನ್ನು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊAಡರು.
ದಸರಾ ಜನೋತ್ಸವಕ್ಕೆ ಮಳೆರಾಯ ಅಡ್ಡಿ ಇರಲಿಲ್ಲ.
(ಮೊದಲ ಪುಟದಿಂದ) ಮಧ್ಯಾಹ್ನ ೧ ಗಂಟೆಯಿAದ ಕೆಲಕಾಲ ತುಂತುರು ಮಳೆಯಾಯಿತು. ನಡುನಡುವೆ ವರುಣ ದರ್ಶನ ನೀಡುತ್ತಿದ್ದ ಕಾರಣ ಮಳೆಯ ಆತಂಕ ಸೃಷ್ಟಿಯಾಗಿತ್ತು. ಇದರಿಂದ ಸಮಸ್ಯೆ ಉಂಟಾಗಬಹುದು ಎಂದು ಊಹಿಸಲಾಗಿತ್ತು. ಆದರೆ, ಸಂಜೆಯಿAದ ಮಳೆ ಬಾರದ ಹಿನ್ನೆಲೆ ದಶಮಂಟಪಗಳ ಶೋಭಾಯಾತ್ರೆ ಸರಾಗವಾಗಿ ನಡೆಯಿತು.
ಸರಳ ಮಂಟಪಗಳು
ಮಡಿಕೇರಿ ದಸರಾದ ಆಕರ್ಷಣೀಯ ಬಿಂದುವಾಗಿರುವ ದಶಮಂಟಪಗಳ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯಿತು. ಕೆಲವೊಂದು ಮಂಟಪಗಳಲ್ಲಿ ಪ್ರಭಾವಳಿ ಸಹಿತ ಸಣ್ಣಪ್ರಮಾಣದ ಚಲನವಲನದೊಂದಿಗೆ ಪೌರಾಣಿಕ ಕಥಾ ಹಂದರವನ್ನು ಪ್ರಸ್ತುತಪಡಿಸಿದರೆ ಉಳಿದ ಮಂಟಪಗಳು ಪ್ರಭಾವಳಿ ಜೊತೆಗೆ ಕಲಾಕೃತಿಯನ್ನು ಹೊತ್ತು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿದವು. ಒಂದು ಟ್ರಾö್ಯಕ್ಟರ್ ಸೇರಿದಂತೆ ಹೆಚ್ಚುವರಿ ವಾಹನ ಬಳಸಿಕೊಂಡು ಮಂಟಪಗಳು ರೂಪುಗೊಂಡಿದ್ದವು.
೧೫೦ಕ್ಕೂ ಹೆಚ್ಚು ವರ್ಷಗಳ ಕಾಲ ಇತಿಹಾಸವಿರುವ ದಶಮಂಟಪಗಳ ಸಾರಥಿ ಎಂದೇ ಪ್ರಸಿದ್ಧಿ ಹೊಂದಿರುವ ಪೇಟೆ ಶ್ರೀರಾಮಮಂದಿರ ದೇವಾಲಯದ ದಸರಾ ಸಮಿತಿ ಈ ಬಾರಿ ಮಂಟಪದಲ್ಲಿ ಸಂಜೀವಿನಿ ಬೆಟ್ಟ ಹೊತ್ತ ಆಂಜನೇಯ ಕಲಾಕೃತಿಯನ್ನು ಹೊತ್ತು ಮುಂದೆ ಸಾಗಿತು. ಈ ಮಂಟಪ ಬೇರೆ ಮಂಟಪಗಳಿರುವ ಸ್ಥಳಗಳಿಗೆ ತೆರಳಿ ಅವುಗಳನ್ನು ಸೇರಿಸಿಕೊಂಡು ಮುನ್ನಡೆಯಿತು.
ಶಕ್ತಿ ದೇವತೆಗಳ ಹಿರಿಯಕ್ಕ ಎಂದು ಕರೆಸಿಕೊಳ್ಳುವ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪದಲ್ಲಿ ಈಶ್ವರ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಕಲಾಕೃತಿಗಳು ಇದ್ದವು. ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಮಂಟಪದಲ್ಲಿ ‘ಗಣಪತಿಯಿಂದ ಶತಮಹಿಷಿ ಸಂಹಾರ’ ಕಥಾ ಸಾರಾಂಶವನ್ನು ಸಣ್ಣ ಪ್ರಮಾಣದ ಚಲನವಲನಗಳೊಂದಿಗೆ ಪ್ರದರ್ಶಿಸಲಾಯಿತು. ದಂಡಿನ ಮಾರಿಯಮ್ಮ ದೇವಾಲಯ ಮಂಟಪದಲ್ಲಿ ‘ದೇವಿಯಿಂದ ಶುಂಭನಿಶುAಭ ಸಂಹಾರ’ದ ಬಗ್ಗೆಗಿನ ಚಿತ್ರಣ ಕಟ್ಟಿಕೊಟ್ಟಿತು.
ಆಂಜನೇಯ ರಥದೊಂದಿಗೆ ಶ್ರೀ ಕಂಚಿಕಾಮಾಕ್ಷಿ ದೇವಾಲಯ ಸಮಿತಿಯ ಮಂಟಪ ರೂಪುಗೊಂಡಿತು. ‘ಹನುಮನಿಂದ ಸುರಸೆಯ ಪರಾಜಯ’ ಕಥಾ ಸಾರಾಂಶವನ್ನು ಚಲನವಲನದೊಂದಿಗೆ ದೇಚೂರು ಶ್ರೀ ರಾಮ ಮಂದಿರ ದೇವಾಲಯ ಸಮಿತಿ ಪ್ರಸ್ತುತಪಡಿಸಿತು. ಕೋದಂಡರಾಮ ದೇವಾಲಯ ಸಮಿತಿ ‘ಮಹಿಷಾಸುರ ಮರ್ಧಿನಿ’ ಕಲಾಕೃತಿಯನ್ನು ರೂಪಿಸಿ ಪ್ರದರ್ಶಿಸಿತು. ಶ್ರೀ ಚೌಡೇಶ್ವರಿ ದೇವಾಲಯ ಸಮಿತಿಯೂ ಕೂಡ ಚಲನವಲನದೊಂದಿಗೆ ‘ಮಹಿಷಾಸುರ ಮರ್ಧಿನಿ’ ಕಥಾ ಹಂದರವನ್ನು ಪ್ರಸ್ತುತಿಪಡಿಸಿತು. ಶ್ರೀ ಕೋಟೆ ಗಣಪತಿ ದೇವಾಲಯದ ಮಂಟಪದಲ್ಲಿ ‘ನರಾಂತರ ದೇವಾಂತಕನ ಸಂಹಾರ’ ಕಥಾ ಹಂದರವನ್ನು ಪ್ರಸ್ತುತ ಪಡಿಸಿದರೆ ಕರವಲೆ ಭಗತಿ ಮಹಿಷ ಮರ್ಧಿನಿ ದೇವಾಲಯದ ಮಂಟಪದಲ್ಲಿ ಈಶ್ವರ ಪಾರ್ವತಿ ಕಲಾಕೃತಿಯನ್ನು ಹೊತ್ತು ಮುನ್ನಡೆಯಿತು.
ನಿರ್ಬಂಧಗಳ ನಡುವೆಯೂ ಮಡಿಕೇರಿ ದಸರಾಕ್ಕೆ ಜನರು ಹೆಚ್ಚಾಗಿ ಆಗಮಿಸಿದ್ದರು. ಒಂದು ಮಂಟಪದ ಎದುರು ಗರಿಷ್ಠ ೧೦೦ ಮಂದಿ ಇರಬೇಕೆಂಬ ನಿಯಮ ಜಿಲ್ಲಾಡಳಿತ ರೂಪಿಸಿತ್ತು. ಆದರೆ, ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನದಟ್ಟಣೆ ಕಂಡುಬAತು.
ಕೋವಿಡ್ ನಿಯಮಗಳನ್ನು ಪಾಲಿಸುತ್ತ ಜನರು ಮಂಟಪಗಳನ್ನು ವೀಕ್ಷಿಸಿದರು. ಜನರಿಂದ ಯಾವುದೇ ರೀತಿಯ ಗೊಂದಲಗಳು ಉಂಟಾಗಲಿಲ್ಲ. ಜನರ ಸಂಖ್ಯೆ ಹೆಚ್ಚಿದ್ದರೂ ಕೂಡ ದಟ್ಟಣೆ ಕಂಡುಬರಲಿಲ್ಲ.
ನವರಾತ್ರಿ ಸಂದರ್ಭ ಜನೋತ್ಸವ ಕಾರ್ಯಕ್ರಮದ ಮೂಲಕ ಜನಮನಸೆಳೆಯುತ್ತಿದ್ದ ವೇದಿಕೆ ಕಾರ್ಯಕ್ರಮಗಳು ಈ ಬಾರಿ ಇರಲಿಲ್ಲ. ಪ್ರವಾಸಿ ತಾಣಗಳು ಕೂಡ ಮುಚ್ಚಲ್ಪಟ್ಟಿದ್ದವು. ಅಲ್ಲಲ್ಲಿ ಅಂಗಡಿ ಮಳಿಗೆಗಳಿಗೆ ಲೈಟಿಂಗ್ ಮೂಲಕ ಅಲಂಕಾರ ಮಾಡಲಾಗಿತ್ತು. ಬೀದಿ ಬದಿಗಳಲ್ಲಿ ವ್ಯಾಪಾರಿಗಳು ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು ಮಾರಾಟ ಮಾಡುತ್ತಿದ್ದರು. ಮಂಜಿನ ನಗರಿಯ ದಸರಾ ಕಣ್ತುಂಬಿಕೊಳ್ಳಲು ಪ್ರವಾಸಿಗರ ಆಗಮನ ಹೆಚ್ಚಾಗಿ ಕಂಡುಬAತು.
ರಾತ್ರಿ ೮ ಗಂಟೆಯ ತನಕವೂ ಬೇರೆ ಮಾರ್ಗಗಳಿಂದ ಬರುವ ವಾಹನಗಳು ನಗರ ಪ್ರವೇಶಿಸುತಿತ್ತು. ಯಾವುದೇ ವಾಹನಗಳನ್ನು ತಡೆಯಲು ಪೊಲೀಸರು ಮುಂದಾಗಲಿಲ್ಲ. ಅಲ್ಲಲ್ಲಿ ನಿಗದಿಪಡಿಸಿರುವ ಜಾಗಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಾಮರಾಜನಗರ, ಮೈಸೂರು, ಹಾಸನ ಸೇರಿದಂತೆ ಕೊಡಗು ಜಿಲ್ಲೆಯ ಒಟ್ಟು ೪೫೦ ಪೊಲೀಸ್ ಸಿಬ್ಬಂದಿಗಳನ್ನು ಪೊಲೀಸ್ ಬಂದೋಬಸ್ತ್ಗಾಗಿ ನಿಯೋಜನೆ ಮಾಡಲಾಗಿತ್ತು.
ಕೆಲವು ಮಂಟಪಗಳಲ್ಲಿ ನಿಗದಿಪಡಿಸಿದ್ದ ‘ಸೌಂಡ್ ಸಿಸ್ಟಮ್’ಗಿಂತ ಹೆಚ್ಚಿನ ಸಾಮರ್ಥ್ಯದ 'ಸ್ಪೀಕರ್' ಅಳವಡಿಸಿದ್ದ ಹಿನ್ನೆಲೆ ಪೊಲೀಸರು ಅವುಗಳನ್ನು ತೆರವುಗೊಳಿಸುವಂತೆ ಸಮಿತಿಗಳಿಗೆ ಸೂಚಿಸಿದರು. ಇದರ ಅನ್ವಯ ಸಮಿತಿಗಳು ಹೆಚ್ಚುವರಿ ಸ್ಪೀಕರ್‌ಗಳನ್ನು ತೆರವು ಮಾಡಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿದವು. ಮಂಟಪಗಳ ಎದುರು ಜನರು ವಾಲಗ ಹಾಗೂ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇಂದು ರಾತ್ರಿ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಶಕ್ತಿ ದೇವತೆಗಳ ಕರಗÀಗಳು ತೆರಳಿ ಸಾಂಪ್ರದಾಯಿಕ ಪೂಜೆ ಬಳಿಕ ಎಲ್ಲಾ ಮಂಟಪಗಳಿರುವ ಜಾಗಕ್ಕೆ ತೆರಳಿ ಪೂಜೆ ಸ್ವೀಕರಿಸಿ ಆನಂತರ ಬನ್ನಿ ಮಂಟಪಕ್ಕೆ ಹೋಗಿ ಬನ್ನಿ ಕಡಿದು ಆಯಾ ದೇವಾಲಯಗಳಿಗೆ ಮರಳಿತು. ಈ ಮೂಲಕ ದಸರಾದ ಸಾಂಪ್ರದಾಯಿಕ ಆಚರಣೆಗಳಿಗೆ ತೆರೆ ಬಿದ್ದಿತು.