ಸೋಮವಾರಪೇಟೆ, ಅ. ೧೩: ಆಯುಧ ಪೂಜೋತ್ಸವ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಕಂಡುಬರುತ್ತಿದ್ದು, ಪಟ್ಟಣದಲ್ಲಿ ಖರೀದಿಯ ಭರಾಟೆ ಜೋರಾಗಿ ನಡೆಯಿತು.

ವಿಶೇಷವಾಗಿ ವಾಹನಗಳಿಗೆ ಪೂಜೆ ನೆರವೇರುವ ಹಿನ್ನೆಲೆ ಪಟ್ಟಣದ ಸರ್ವಿಸ್ ಸ್ಟೇಷನ್‌ಗಳಲ್ಲಿ ಕಾರ್ಮಿಕರು, ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇದರೊಂದಿಗೆ ವರ್ಕ್ಶಾಪ್‌ಗಳಲ್ಲೂ ಶುಚಿತ್ವ ಕಾರ್ಯ ಭರದಿಂದ ನಡೆಯಿತು.

ಆಯುಧ ಪೂಜೋತ್ಸವ ಹಿನ್ನೆಲೆ ಪಟ್ಟಣದ ಅಂಗಡಿ ಮುಂಗಟ್ಟುಗಳಲ್ಲೂ ವ್ಯಾಪಾರ ಜೋರಾಗಿತ್ತು. ಹೂವು, ಬೂದು ಕುಂಬಳಕಾಯಿ ವಹಿವಾಟು ಭರ್ಜರಿಯಾಗಿ ನಡೆಯಿತು.

ದಸರಾ ಜನೋತ್ಸವದಂತೆಯೇ ಆಯುಧ ಪೂಜೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದ ಮೋಟಾರ್ ಯೂನಿಯನ್ ಈ ಬಾರಿ ಸರಳ ಆಚರಣೆಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕೋವಿಡ್ ಹಿನ್ನೆಲೆ ಅದ್ಧೂರಿ ಆಚರಣೆಯನ್ನು ಕೈಬಿಡಲಾಗಿದ್ದು, ಆಯುಧ ಪೂಜೆಯಂದು ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ತಿಳಿಸಿದ್ದಾರೆ.

ಉಳಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಆಯುಧ ಪೂಜೋತ್ಸವದ ಸಂಭ್ರಮ ಕಂಡುಬರುತ್ತಿದೆ. ವಾಹನ, ಮನೆ, ಅಂಗಡಿ, ಕಚೇರಿಗಳ ಸ್ವಚ್ಛತಾ ಕಾರ್ಯ ನಡೆದಿದ್ದು, ಪೂಜೆಗೆ ಸಿದ್ಧತೆ ನಡೆಸಲಾಗಿದೆ.