*ವೀರಾಜಪೇಟೆ, ಅ. ೧೩: ವೀರಾಜಪೇಟೆ ನಗರದಲ್ಲಿ ಇತ್ತೀಚೆಗೆ ಹಲವು ವಾರ್ಡುಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿರುವ ಕುರಿತು ದೂರು ಕೇಳಿಬರುತ್ತಿವೆ. ಸುಭಾಷ್ ನಗರ, ಅರಸುನಗರ, ಮಾಂಸ ಮಾರುಕಟ್ಟೆ ರಸ್ತೆ ಸೇರಿದಂತೆ ಹಲವು ವಾರ್ಡುಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದೆ. ಬರೇ ವಾರ್ಡುಗಳ ರಸ್ತೆಗಳಲ್ಲಿ ಮಾತ್ರ ಇವೂ ಬೀಡುಬಿಟ್ಟಿಲ್ಲ, ವೀರಾಜಪೇಟೆಯ ಶಕ್ತಿಸೌಧ ಎಂದೇ ಹೆಸರಾದ ಮಿನಿ ವಿಧಾನಸೌಧದ ಮುಂದೆಯೂ ರಾಜಾರೋಷವಾಗಿ ಮಲಗಿ ನಿದ್ರಿಸಿರುತ್ತವೆ.
ರಾಜ್ಯದ ಹಲವೆಡೆ ಬೀದಿನಾಯಿಗಳು ಮಕ್ಕಳ ಮೇಲೆ, ವಾಯು ವಿಹಾರಕ್ಕೆ ತೆರಳುವ ವೃದ್ಧರ ಮೇಲೆ ಧಾಳಿ ಮಾಡಿ ಕೊಂದ ಘಟನೆಗಳು ವರದಿಯಾಗಿವೆ. ಅದೃಷ್ಟವಶಾತ್ ವೀರಾಜಪೇಟೆ ನಗರದಲ್ಲಿ ಬೀದಿನಾಯಿಗಳು ಆ ಮಟ್ಟಿಗಿನ ಹೆಜ್ಜೆಯನ್ನು ಇನ್ನೂ ಇರಿಸಿಲ್ಲ. ಇದರ ಬಗ್ಗೆ ತಾ. ೩೦-೦೯-೨೦೨೧ ರಂದು ನಡೆದ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಮೊಹಮ್ಮದ್ ರಾಫಿಯವರು ಬೀದಿ ನಾಯಿಗಳ ಸಂಖ್ಯೆ ಹೆಚ್ಚಳದ ಬಗ್ಗೆ ಕ್ರಮ ವಹಿಸಲು ಮಾತನಾಡಿದ್ದರು. ಅದಕ್ಕಾಗಿಯೇ ವಿಶೇಷ ನಿಧಿಯನ್ನು ಮೀಸಲು ಇರಿಸಲು ಕೂಡಾ ತಿಳಿಸಿದ್ದರು. ಮುಖ್ಯಾಧಿಕಾರಿಯವರು ನಾಯಿಗಳನ್ನು ಹಿಡಿಯ ಹೊರಟರೆ ಪ್ರಾಣಿದಯ ಸಂಘದವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅಲ್ಲದೇ ಇತ್ತೀಚೆಗೆ ಶಿವಮೊಗ್ಗದಲ್ಲಿ ಪ್ರಾಣಿದಯಾ ಸಂಘದಿAದ ದೂರು ದಾಖಲಾಗಿರುವ ಬಗ್ಗೆಯೂ ತಿಳಿಸಿದ್ದರು.
ಸಭೆಯಲ್ಲಿ ಯಾವ ತಾರ್ಕಿಕ ಅಂತ್ಯ ಕಾಣದೇ ವಿಚಾರ ಅಲ್ಲಿಗೆ ನಿಂತಿತು. ಆದರೆ ವೀರಾಜಪೇಟೆ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಮಾತ್ರ ತಗ್ಗುತ್ತಿಲ್ಲ. ಪಟ್ಟಣ ಪಂಚಾಯಿತಿ ಅದಕ್ಕೆ ಯಾವ ಕ್ರಮವನ್ನು ವಹಿಸಿದಂತೆ ಕಂಡುಬರುತ್ತಿಲ್ಲ.
ನಗರದಲ್ಲಿ ಈ ರೀತಿಯಾಗಿ ಹೆಚ್ಚಳವಾಗಿರುವ ಬೀದಿನಾಯಿಗಳ ಬಗ್ಗೆ ಸಾರ್ವಜನಿಕರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮಾಡಿ ಹರಿಬಿಡುತ್ತಿದ್ದು, ನಮ್ಮ ವೀರಾಜಪೇಟೆ ಸ್ಥಿತಿನೋಡಿ ಎಂದು ಮಾತನಾಡಲಾರಂಭಿಸಿದ್ದಾರೆ.
ಸಮಸ್ಯೆ ವಿಕೋಪಕ್ಕೆ ಹೋಗುವ ಮುನ್ನ ಪಟ್ಟಣ ಪಂಚಾಯಿತಿ ಪ್ರಾಣಿತಜ್ಞರ ಜೊತೆಗೆ ಸಂಪರ್ಕ ಮಾಡಿ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲೇಬೇಕಾಗಿದೆ. ನಾಯಿ ಹಿಡಿದರೆ, ನಾಯಿ ಕೊಂದರೆ ಪ್ರಾಣಿದಯಾ ಸಂಘದವರು ಕಾನೂನು ಹೋರಾಟ ಮಾಡುತ್ತಾರೆ ಎನ್ನುವುದಾದರೆ ಅದನ್ನು ಹೊರತುಪಡಿಸಿದ ಬೇರೆ ಯಾವ ಕ್ರಮ ಕಂಡುಹಿಡಿಯಬಹುದಾಗಿದೆ ಎನ್ನುವುದನ್ನು ಪಟ್ಟಣ ಪಂಚಾಯಿತಿ ಶೀಘ್ರವಾಗಿ ಯೋಚಿಸಬೇಕಿದೆ. ಇಲ್ಲದೇ ಹೋದಲ್ಲಿ ಬೀದಿ ನಾಯಿಗಳಿಂದ ಮುಂದೊAದು ದಿನ ಬಂದೊದಗುವ ಅಪಾಯಕ್ಕೆ ಪಟ್ಟಣ ಪಂಚಾಯಿತಿಯೇ ಹೊಣೆಯಾಗಬೇಕಾಗುತ್ತದೆ.