ಸೋಮವಾರಪೇಟೆ, ಅ.೧೩: ರಸ್ತೆ ಕಳಪೆ ಕಾಮಗಾರಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಅಂದು ಕಾರ್ಯನಿರ್ವಹಿಸಿದ್ದ ಮೂವರು ಇಂಜಿನಿಯರ್‌ಗಳಿAದ ೭,೪೫,೫೩೯ ರೂ.ಗಳನ್ನು ವಸೂಲಿ ಮಾಡಲು ಸರ್ಕಾರ ಅ.೧೧ರಂದು ಆದೇಶ ಹೊರಡಿಸಿದೆ.
೨೦೧೨ ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ಯಡೂರು, ಮಾವಿನಕಟ್ಟೆ, ಬಾರ್ಲಗದ್ದೆ, ಹರಗ, ಕಿಕ್ಕರಳ್ಳಿ ರಸ್ತೆಯ ಕಾಮಗಾರಿಯನ್ನು ಬೆಂಗಳೂರಿನ ಗುತ್ತಿಗೆದಾರ ವಸಂತ ಎಂಬವರು ೨೮,೭೨,೭೫೮ ರೂ.ಗಳಿಗೆ ಟೆಂಡರ್ ಪಡೆದಿದ್ದು ನಂತರ ಅದನ್ನು ಉದಯ ರವರು ಸಬ್ ಕಾಂಟ್ರಾಕ್ಟ್ ತೆಗೆದುಕೊಂಡು ಕಾಮಗಾರಿಯನ್ನು ನಿರ್ವಹಿಸಿದ್ದರು.
ಕಾಮಗಾರಿ ಕಳಪೆಯಾಗಿದೆ ಎಂದು ಹರಗ ಗ್ರಾಮದ ಡಾಲಿ ಪ್ರಕಾಶ್ ರವರು ೨೦೧೨ನೆ ಇಸವಿಯಲ್ಲಿ ಲೋಕಾಯುಕ್ತಕ್ಕೆ ದೂರನ್ನು ಸಲ್ಲಿಸಿದ್ದರು. ಈ ಬಗ್ಗೆ ಅಂದು ತನಿಖೆ ನಡೆಸಿದ್ದ ಲೋಕಾಯುಕ್ತ ತಂಡವು ದುರುಪಯೋಗವಾದ ಹಣವನ್ನು ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಸರ್ಕಾರಕ್ಕೆ ವರದಿಯೊಂದಿಗೆ ಶಿಫಾರಸ್ಸು ಮಾಡಿತ್ತು. ನಂತರ ಅಧಿಕಾರಿಗಳು ಮೇಲ್ಮನವಿ ಯನ್ನು ಸಲ್ಲಿಸಿದ್ದರು. ಮೇಲ್ಮನವಿ ಆಲಿಸಿದ ನಂತರ ಸರ್ಕಾರವು ಲೋಕಾಯುಕ್ತರ ಶಿಫಾರಸ್ಸನ್ನು ಎತ್ತಿಹಿಡಿದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜಪ್ಪ ಅ.೧೧ ರಂದು ಆದೇಶ ನೀಡಿದ್ದಾರೆ.
ಅಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಟಿ.ಹೆಚ್ ಲಿಂಗರಾಜ್(ಈಗ ನಿವೃತ್ತಿ ಹೊಂದಿದ್ದಾರೆ) ಅವರಿಂದ ೨,೭೯,೫೭೮ ರೂ., ಈಗ ಜಿಲ್ಲಾ ಪಂಚಾಯತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭಿಯಂತರರಾದ ಭಾಸ್ಕರ್ ಅವರಿಂದ ೨,೭೯,೫೭೭ ರೂ., ಮತ್ತು ಅಂದಿನ ಕಾರ್ಯಪಾಲಕ ಅಭಿಯಂತರ ದೊಡ್ಡ ಸಿದ್ದಯ್ಯ(ಈಗ ನಿವೃತ್ತಿ) ಅವರಿಂದ ೧,೮೬,೩೮೪ ರೂ.ಗಳನ್ನು ವಸೂಲಿ ಮಾಡುವಂತೆ ಆದೇಶಿಸಿದೆ.
ರಸ್ತೆ ಕಾಮಗಾರಿ ಕಳಪೆಯಾಗಿರುವುದನ್ನು ಗಮನಿಸಿ ನಮ್ಮ ತಂಡದ ಹರಗ ಗ್ರಾಮದ ಡಾಲಿ ಪ್ರಕಾಶ್ ದೂರು ನೀಡಿದ್ದರು. ಲೋಕಾಯುಕ್ತರು ಸ್ಥಳಪರಿಶೀಲನೆ ಮಾಡಿ ಸೂಕ್ತ ರೀತಿಯಲ್ಲಿ ತನಿಖೆ ಮಾಡಿದ್ದಾರೆ. ಅಂದಾಜು ಪಟ್ಟಿಯಂತೆ ಕೆಲಸಗಳು ಆಗುತ್ತಿಲ್ಲ. ಬಹುತೇಕ ಕಾಮಗಾರಿ ಕಳಪೆಯಾಗಿ ಬಾಳಿಕೆ ಬರುತ್ತಿಲ್ಲ. ಕೇಳುವವರೆ ಇಲ್ಲದಂತಾಗಿದೆ. ಕೆಲವು ಕಡೆ ಕಾಮಗಾರಿ ನಿರ್ವಹಿಸಿದೆ ಬಿಲ್ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕೆಂದು ಆರ್‌ಟಿಐ ಕಾರ್ಯಕರ್ತ ಬಗ್ಗನ ಅನಿಲ್‌ಕುಮಾರ್ ಅಭಿಪ್ರಾಯಿಸಿದ್ದಾರೆ.