ಸೋಮವಾರಪೇಟೆ, ಅ. ೧೩: ಶರನ್ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಗಿರುವ ಶ್ರೀ ದುರ್ಗಾದೇವಿಯ ಉತ್ಸವ ಮೂರ್ತಿಗೆ ಪ್ರತಿ ದಿನ ವಿವಿಧ ಅಲಂಕಾರಗಳನ್ನು ಮಾಡಿ ಪೂಜಿಸಲಾಗುತ್ತಿದೆ.

ಬಸವೇಶ್ವರ ದೇವಾಲಯ ಸಮಿತಿ, ವೀರಶೈವ ಸಮಾಜ, ಅಕ್ಕನ ಬಳಗ, ಬಸವೇಶ್ವರ ಯುವಕ ಸಂಘ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಉತ್ಸವ ಆಯೋಜಿಸಿದ್ದು, ಪ್ರತಿದಿನ ಸಂಜೆ ವಿಶೇಷ ಅಲಂಕಾರ, ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತಿದೆ. ನೂರಾರು ಭಕ್ತಾದಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.

ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಗಿರುವ ಶ್ರೀ ದುರ್ಗಾದೇವಿಗೆ ಹೂವಿನ ಅಲಂಕಾರ, ವೀಳ್ಯದೆಲೆಗಳ ಅಲಂಕಾರ, ಗೆಜ್ಜೆವಸ್ತç ಅಲಂಕಾರ, ಬಳೆಗಳ ಅಲಂಕಾರ, ಹಣ್ಣಿನ ಅಲಂಕಾರ, ನವಿಲುಗರಿ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿ ಸಲಾಗುತ್ತಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಬಿ.ಪಿ. ಶಿವಕುಮಾರ್ ತಿಳಿಸಿದ್ದಾರೆ.

ಸೋಮೇಶ್ವರ ದೇವಾಲಯ: ಇಲ್ಲಿನ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದಲ್ಲಿ ಶ್ರೀ ಶಕ್ತಿ ಪಾರ್ವತಿ ದೇವಿಗೆ ಪ್ರತಿದಿನ ವಿವಿಧ ಅಲಂಕಾರಗಳನ್ನು ಮಾಡಿ ಪೂಜಿಸಲಾಗುತ್ತಿದೆ.

ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಶಕ್ತಿ ಪಾರ್ವತಿ ಉತ್ಸವ ಮೂರ್ತಿಗೆ ಹೂವಿನ ಅಲಂಕಾರ, ಅವರೆಕಾಳು ಧಾನ್ಯದ ಅಲಂಕಾರ, ಮಧುರೆ ಮೀನಾಕ್ಷಿ ಅಲಂಕಾರ, ವೀಳ್ಯದೆಲೆ ಅಲಂಕಾರ, ಅರ್ಧನಾರೀಶ್ವರ ಅಲಂಕಾರ ಮಾಡಿ ಪೂಜಿಸಲಾಗುತ್ತಿದ್ದು, ಪ್ರತಿ ದಿನ ನೂರಾರು ಭಕ್ತಾದಿಗಳು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.