ಕೂಡಿಗೆ, ಅ. ೧೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಜುಲೈ ತಿಂಗಳುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಸಂಪೂರ್ಣವಾಗಿ ಭರ್ತಿಯಾಗುವುದು ಸಾಮಾನ್ಯ. ಆದರೆ ಕಳೆದ ೧೫ ದಿನಗಳಿಂದ ಸತತವಾಗಿ ಅಕಾಲಿಕ ಮಳೆ ಬೀಳುತ್ತಿರುವ ಹಿನ್ನೆಲೆ ಅಣೆಕಟ್ಟೆಗೆ ಒಳಹರಿವಿನ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾಗಿದೆ.

ಹಾರಂಗಿ ಅಣೆಕಟ್ಟೆಯ ನೀರಿನ ಮಟ್ಟ ೨೮೫೮.೧೨ ಅಡಿ ಇದೆ. ಅಣೆಕಟ್ಟೆಯ ನೀರಿನ ಸಂಗ್ರಹದ ಸಾಮರ್ಥ್ಯ ೮.೨ ಟಿ.ಎಂ.ಸಿ. ಇದೀಗ ೭.೪೫ ಟಿ.ಎಂ.ಸಿ. ಭರ್ತಿಯಾಗಿದೆ. ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆ ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ನೀರಿನ ಮಟ್ಟವನ್ನು ಕಾಯ್ದುಕೊಂಡು ಈಗಾಗಲೇ ನಾಲೆಗೆ ೫೫೦ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಇದರ ಜೊತೆಯಲ್ಲಿ ಅಣೆಕಟ್ಟೆಯ ನೀರಿನ ಏರಿಕೆ ಮತ್ತು ಇಳಿಕೆ ಪ್ರಮಾಣದ ಅನುಗುಣವಾಗಿ ನದಿಗೆ ೭೦೦ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

- ಕೆ.ಕೆ. ನಾಗರಾಜಶೆಟ್ಟಿ.