ಶನಿವಾರಸಂತೆ, ಅ. ೧೨: ಹಾನಗಲ್ಲು ಶ್ರೀಕುಮಾರ ಶಿವಯೋಗಿಗಳು ಹಾಗೂ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರು ಇಬ್ಬರೂ ಕಾಯಕ ಯೋಗಿಗಳಾಗಿದ್ದು, ನಿತ್ಯ ಸ್ಮರಣೀಯರು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸಮಿತಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅರುಣಾದೇವಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಭದ್ರಮ್ಮ-ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಡೆದ ಹಾನಗಲ್ಲು ಶ್ರೀ ಕುಮಾರ ಶಿವಯೋಗಿಗಳ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಹಿಳಾ ಘಟಕದ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಭಿಕ್ಷೆ ಬೇಡಿ ತಿನ್ನದೇ ದುಡಿದು ಸಂಪಾದಿಸಿ ತಿನ್ನುವ ಮನೋಭಾವ ಮೂಡಿಸಿದ ಕಾಯಕಯೋಗಿಗಳು ಆದರ್ಶ ಪುರುಷರಾಗಿದ್ದಾರೆ. ಸ್ವಾರ್ಥ ಮರೆತು ಬಾಲ್ಯದಿಂದಲೇ ಮಕ್ಕಳನ್ನು ತಿದ್ದಿತೀಡಿ ಸಂಸ್ಕೃತಿ, ಸಂಸ್ಕಾರ ಕಲಿಸುವ ಮಾತೆಯರು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾರೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಹಿರಿಯ ಸದಸ್ಯ ತಿಪ್ಪಣ್ಣ ಮಾತನಾಡಿ, ಶತಮಾನದಿಂದಲೂ ವೀರಶೈವರು - ಲಿಂಗಾಯಿತರು ಒಂದೇ ಆಗಿರುತ್ತಾರೆ. ೧೦೭ ಒಳಪಂಗಡಗಳೆAದು ಹೇಳದೇ ಭಿನ್ನಭೇದ, ಭಿನ್ನಾಭಿಪ್ರಾಯಗಳನ್ನು ತೊರೆದು ಒಂದೇ ಎಂಬ ಭಾವನೆ ಮೂಡಿಸಬೇಕು. ಮಕ್ಕಳು ವಿದ್ಯಾವಂತರಾಗಲು ತಾಯಂದಿರ ಶ್ರಮವೇ ಕಾರಣ. ಸಮಾರಂಭದಲ್ಲಿ ಪೇಟ, ಹಾರ - ತುರಾಯಿ ಬೇಡ. ಶರಣರ ವಚನಗಳ ಪುಸ್ತಕ ನೀಡಿ ಗೌರವಿಸಿ ಎಂದು ಕರೆ ನೀಡಿದರು.

ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಆಶಯ ನುಡಿಗಳನ್ನಾಡಿ, ಕೊಡಗು ಜಿಲ್ಲೆಯ ವೀರಶೈವ ರಾಜರು ಆಳ್ವಿಕೆಗೆ ಮಾದರಿಯಾಗಿದ್ದಾರೆ. ಪುಟ್ಟ ಜಿಲ್ಲೆಯಲ್ಲಿ ಸಂಘಟನೆ ಶ್ರಮದಾಯಕವಾಗಿದ್ದು, ವೀರಶೈವ - ಲಿಂಗಾಯಿತ ಧರ್ಮ ಗುರುತಿಸುವಿಕೆ, ಸಂಘಟನೆಗೆ ಒತ್ತು ಕೊಡುವ ಕಾರ್ಯ ನಡೆಯಿತು. ಶಕ್ತಿಯುತ ಸಂಘಟನೆಯ ಪ್ರಯತ್ನ ನಡೆದಿದೆ ಎಂದರು.

ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಕನ್ನಡ ಮಠದ ಚನ್ನಬಸವದೇಶಿ ಕೇಂದ್ರ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ವಿರಕ್ತ ಮಠದ ಮೋಕ್ಷಪತಿ ಸ್ವಾಮೀಜಿ, ಪ್ರಮುಖರಾದ ಪಾರ್ವತಿ ರೆಡ್ಡಿ, ಜಿ.ಎಂ. ಕಾಂತರಾಜ್, ಶಾಂಭಶಿವ ಮೂರ್ತಿ, ಹಾಲಪ್ಪ, ಮಮತಾ, ಡಿ.ಬಿ. ಧರ್ಮಪ್ಪ, ಹೇಮಲತಾ, ವಿಶ್ವನಾಥ್, ಮಹಾದೇವಿ ಉಪಸ್ಥಿತರಿದ್ದರು.