ಸುಂಟಿಕೊಪ್ಪದ ವಾಹನ ಚಾಲಕರ ಸಂಘವು ಆಚರಿಸಿಕೊಂಡು ಬರುತ್ತಿರುವ ಆಯುಧ ಪೂಜಾ ಸಮಾರಂಭಕ್ಕೆ ಇದೀಗ ೫೧ ವರ್ಷ. ಇಂದಿಗೂ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿ ಈ ಸಂಘ ಗುರುತಿಸಿಕೊಂಡಿರುತ್ತದೆ. ೧೯೭೦ ರಿಂದ ಸುಂಟಿಕೊಪ್ಪದ ಆಯುಧ ಪೂಜಾ ಸಮಾರಂಭವು "ಭಾವೈಕ್ಯತೆಯ" ಆಯುಧಾ ಪೂಜಾ ಸಮಾರಂಭವಾಗಿ ಇಲ್ಲಿ ಜಾತಿ ಮತ ಭೇದ ಭಾವ ವಿಲ್ಲದೆ ಒಗ್ಗಟಿನಿಂದ ಪೂಜಾ ಕೈಂಕರ್ಯ, ತಮ್ಮ ವಾಹನಗಳ ಅಲಂಕಾರ, ಅಂಗಡಿಗಳ ಅಲಂಕಾರ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು, ಎಲ್ಲಾ ಧರ್ಮಿಯರೂ ಕಾರು ನಿಲ್ದಾಣದಲ್ಲಿ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಂಡು ಸಹೋದರಂತೆ ಬಾಳುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ.

ಕಳೆದ ೫೧ ವರ್ಷಗಳಲ್ಲಿ ಸಂಘದ ಅಧ್ಯಕ್ಷರುಗಳಾಗಿ ರಾಮರಾಜು ನಾಯ್ಡು, ಜೋಸೆಫ್, ಜಿ. ಎಲ್. ನಾಗರಾಜ್, ಹಂಸ, ಬಿ.ಎಂ. ಪೂವಪ್ಪ ಕ್ಲಾಡಿಯಸ್ ಲೋಬೊ ಹೀಗೆ ವಿವಿಧ ಜನಾಂಗ ಬಾಂಧವರು ಸೇವೆ ಸಲ್ಲಿಸಿದ್ದು, ಇವರೆಲ್ಲರ ಹೆಸರಿನಿಂದಲೇ ಸುಂಟಿಕೊಪ್ದದ ಭಾವೈಕ್ಯತೆಯನ್ನು ಕಾಣಬಹುದು. ಇದೇ ಸಂಘವು ಸುಮಾರು ಇನ್ನೂರರಷ್ಟು ಸದಸ್ಯರನ್ನು ಹೊಂದಿಕೊAಡಿದೆ. ಇವುಗಳಿಗೆಲ್ಲಾ ಮಿಗಿಲಾಗಿ ಇಂದಿಗೂ ದೂರದ ಊರಿನಲ್ಲಿ ನೆಲೆಸಿರುವ ಸ್ಥಳೀಯರು ಆಯುಧ ಪೂಜಾ ಸಮಾರಂಭದ ಹಳೆಯ ನೆನಪುಗಳನ್ನು, ವೈಭವವನ್ನು ಮೆಲುಕು ಹಾಕುವುದು ವಾಡಿಕೆಯಾಗಿದೆ.

ಊರಿನ ಏನೇ ಬೇಡಿಕೆಗಳಿದ್ದರೂ ಅವುಗಳ ಮನವಿ ಹಾಗೂ ಪರಿಹಾರವನ್ನು ಈ ಆಯುಧ ಪೂಜಾ ಸಮಾರಂಭ ವೇದಿಕೆಯಿಂದಲೇ ಈಡೇರಿಸುತ್ತಾ ಬಂದಿದ್ದು, ಈ ಸಮಾರಂಭದ ಮಹತ್ವವನ್ನು ಅರಿಯಬಹುದು. ಅಂದಿನ ಪ್ರಸಾದ ಪುರಿ, ಕಬ್ಬು, ಬೆಲ್ಲದ ಮಿಶ್ರಣ ಅದು ಕೂಡ ಭಾವೈಕ್ಯತೆಯ ಸ್ವಾದವನ್ನು ನೆನಪಿಸುತ್ತದೆ.

ಇದೀಗ ಕಳೆದ ಎರಡು ವರ್ಷಗಳಿಂದ ಸುಂಟಿಕೊಪ್ಪದ ಸಂಭ್ರಮಕ್ಕೆ ಕೊರೊನಾದ ಕರಿ ನೆರಳಿನ ಛಾಯೆಯಿಂದ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದ್ದು, ಮತ್ತೇ ಆ ಹಳೇ ವೈಭವವನ್ನು ಸಂಭ್ರಮಿಸುವ ದಿನಗಳನ್ನು ಇಲ್ಲಿನ ನಾಗರಿಕರು ಎದುರು ನೋಡುತ್ತಿದ್ದಾರೆ.