ಸೋಮವಾರಪೇಟೆ, ಅ. ೧೨: ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೩೦೯(ಬಿ)ರ ಅನ್ವಯ ಗ್ರಾ. ಪಂ. ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಮುಂದಿನ ದಿನಗಳಲ್ಲಿ ಅವುಗಳನ್ನು ತೊಡೆದು ಹಾಕಲು ಯೋಜನೆ ತಯಾರಿಸ ಬೇಕಿದೆ ಎಂದು ಜಿಲ್ಲಾ ಮಾಲ್ಯಮಾಪನ ಅಧಿಕಾರಿ ರವೀಂದ್ರಕುಮಾರ್ ಅವರು ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಗುರಿ ನಿಗದಿ ಮಾಡಿ ಐದು ವರ್ಷಗಳ ದೂರದೃಷ್ಟಿ ಯೋಜನೆಗಳಲ್ಲಿ, ಲಭ್ಯ ಸಂಪನ್ಮೂಲಗಳ ಆಧಾರದ ಮೇಲೆ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ಮಾಡಿಕೊಳ್ಳಬೇಕಿದೆ ಎಂದರು.
ಗ್ರಾಮಗಳಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಮಾಜಿಕ ಭದ್ರತೆ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಗ್ರಾಮೀಣ ಜನರ ಜೀವನೋಪಾಯ ಸೇರಿದಂತೆ ಹಲವು ಕ್ಷೇತ್ರಗಳನ್ನು ಗುರುತಿಸಿ ಅಧಿಕಾರಿಗಳು ಕೆಲಸ ಮಾಡಬೇಕಿದೆ ಎಂದರು.
ಕಾರ್ಯಾಗಾರವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಜಯಣ್ಣ ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನಾ ತಂಡವನ್ನು ರಚಿಸಿ ಅದಕ್ಕೆ ಅಧ್ಯಕ್ಷರನ್ನಾಗಿ ಗ್ರಾ.ಪಂ. ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಉಳಿದಂತೆ ಗ್ರಾ.ಪಂ ಸದಸ್ಯರು, ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳನ್ನು ಒಳಗೊಂಡAತೆ ಸಮಿತಿ ರಚಿಸಲಾಗುವುದು. ಈ ಸಮಿತಿಯು ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿಯನ್ನು ಸಂಬAಧಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಾಮಾನ್ಯರಿಗೆ ನೀಡಿ, ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕು. ಗ್ರಾಮದ ಎಲ್ಲ ಸಂಘ ಸಂಸ್ಥೆಗಳು ಭಾಗಿಯಾಗುವಂತೆ ನೋಡಿಕೊಳ್ಳಬೇಕೆಂದರು.
ಕಾರ್ಯಾಗಾರದಲ್ಲಿ ಸ್ವಚ್ಛ ಭಾರತ್ ಮಿಷನ್‌ನ ಜಿಲ್ಲಾ ಸಮಾಲೋಚಕ ಡಿ.ಡಿ. ಪೆಮ್ಮಯ್ಯ ಸೇರಿದಂತೆ ತಾಲೂಕಿನ ವಿವಿಧ ಇಲಾಖಾಧಿ ಕಾರಿಗಳು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಎನ್‌ಆರ್ ಇಜಿಯ ಶಿಕ್ಷಣ ಸಂಯೋಜಕ ಪವನ್, ಜಿಲ್ಲಾ ಎಂಐಎಸ್ ಸಂಯೋಜಕ ಉಮೇಶ್, ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಮಾದೇಶ್ ಪಾಲ್ಗೊಂಡಿದ್ದರು.