ಮಡಿಕೇರಿ, ಅ. ೧೨: ಕೊಡಗು ಜಿಲ್ಲೆಯ ವಿವಿಧೆಡೆ ಯಶಸ್ವೀ ಪ್ರದರ್ಶನಗಳನ್ನು ಕಂಡಿರುವ “ನಾಡ ಪೆದ ಆಶಾ” ಚಲನಚಿತ್ರ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಪ್ರದರ್ಶನಗೊಂಡಿತು ಈ ಸಂದರ್ಭ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್, ಕೊಡವ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೊಡವ ಚಲನಚಿತ್ರಗಳು ಹೆಚ್ಚು ಸಹಕಾರಿಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ನಮ್ಮ ಪ್ರಾಚೀನ ಸಂಸ್ಕೃತಿ ಮರೆಯಾಗುವ ಆತಂಕವಿದ್ದು, ಸಿನಿಮಾಗಳ ಮೂಲಕವೂ ಕೊಡವ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಚಿತ್ರದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಜಿಲ್ಲೆಯಾದ್ಯಂತ ೫೦ ಪ್ರದರ್ಶನಗಳನ್ನು ಕಂಡಿರುವ “ನಾಡ ಪೆದ ಆಶಾ” ಯಶಸ್ಸಿಗೆ ಜನರ ಪ್ರೋತ್ಸಾಹವೇ ಕಾರಣವೆಂದರು. ತಾ. ೧೩ ರಂದು (ಇಂದು) ಬಾಳೆಲೆ, ೧೫ ರಂದು ಕುಟ್ಟ ಮತ್ತು ೧೮ ರಂದು ಚೇರಂಬಾಣೆ ಕೊಡವ ಸಮಾಜದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಕೊಡವ ಸಮಾಜಗಳನ್ನು ಚಿತ್ರಪ್ರದರ್ಶನಕ್ಕೆ ಉದಾರವಾಗಿ ಬಿಟ್ಟುಕೊಡುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿಸಿದರು. ಉಪಾಧ್ಯಕ್ಷ ಮಾಣೀರ ವಿಜಯ ನಂಜಪ್ಪ, ಕಾರ್ಯದರ್ಶಿ ಮನ್ನೇರ ಎ. ರಮೇಶ್, ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ನಾಯಕ ನಟ ಬೊಳ್ಳಜಿರ ಬಿ. ಅಯ್ಯಪ್ಪ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.